ಕರ್ನಾಟಕ

karnataka

ETV Bharat / bharat

ಬಿಜೆಪಿ ಟಿಕೆಟ್​ ವಂಚಿತ ವರುಣ್​ ಗಾಂಧಿಗೆ ಕಾಂಗ್ರೆಸ್​ ಗಾಳ: ಅಧೀರ್​ ರಂಜನ್​ ಹೇಳಿದ್ದೇನು? - Varun Gandhi - VARUN GANDHI

ಬಿಜೆಪಿ ಟಿಕೆಟ್​ ವಂಚಿತ ವರುಣ್​ ಗಾಂಧಿಗೆ ಕಾಂಗ್ರೆಸ್​ ಸೇರಲು ಆಹ್ವಾನಿಸಲಾಗಿದೆ. ಲೋಕಸಭೆ ಕಾಂಗ್ರೆಸ್​ ನಾಯಕ ಅಧೀರ್ ರಂಜನ್ ಚೌಧರಿ ಅವರು ಪಕ್ಷಕ್ಕೆ ಬರಲು ಕೋರಿದ್ದಾರೆ.

ವರುಣ್​ ಗಾಂಧಿ
ವರುಣ್​ ಗಾಂಧಿ

By ANI

Published : Mar 26, 2024, 6:10 PM IST

Updated : Mar 26, 2024, 8:00 PM IST

ಮುರ್ಷಿದಾಬಾದ್ (ಪಶ್ಚಿಮ ಬಂಗಾಳ):ಪಕ್ಷ ಮತ್ತು ಸರ್ಕಾರದ ವಿರುದ್ಧ ಆಗಾಗ್ಗೆ ಸಿಡಿದು ಮುಜುಗರ ಉಂಟು ಮಾಡುತ್ತಿದ್ದ ನೆಹರೂ - ಗಾಂಧಿ ಕುಟುಂಬದ ಕುಡಿ ವರುಣ್​ ಗಾಂಧಿಗೆ ಈ ಬಾರಿ ಬಿಜೆಪಿ ಟಿಕೆಟ್​ ನಿರಾಕರಿಸಿದೆ. ಹೀಗಾಗಿ ಅವರನ್ನು ಕಾಂಗ್ರೆಸ್​ ಪಕ್ಷಕ್ಕೆ ಸೇರಲು ಲೋಕಸಭೆಯ ಕಾಂಗ್ರೆಸ್​ ನಾಯಕ ಅಧೀರ್ ರಂಜನ್ ಚೌಧರಿ ಕೋರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ವರುಣ್​ ಗಾಂಧಿ ಅವರು ಕಾಂಗ್ರೆಸ್​ ಪಕ್ಷ ಸೇರಬಹುದು. ಅವರನ್ನು ಪಕ್ಷಕ್ಕೆ ಆಹ್ವಾನಿಸಲಾಗುವುದು. ಗಾಂಧಿ ಕುಟುಂಬದ ಹಿನ್ನೆಲೆಯ ಕಾರಣ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ ಎಂದು ಹೇಳಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಿಲಿಭಿತ್‌ನ ಹಾಲಿ ಸಂಸದ ವರುಣ್ ಗಾಂಧಿ ಅವರನ್ನು ಕಣಕ್ಕಿಳಿಸದಿರಲು ಭಾರತೀಯ ಜನತಾ ಪಕ್ಷ (ಬಿಜೆಪಿ) ನಿರ್ಧರಿಸಿದೆ. ವರುಣ್ ಗಾಂಧಿ ಅವರು ಗಾಂಧಿ ಕುಟುಂಬದ ಜೊತೆಗಿನ ಸಂಪರ್ಕದಿಂದಾಗಿ ಟಿಕೆಟ್ ನಿರಾಕರಿಸಲಾಗಿದೆ. ಅವರು ಕಾಂಗ್ರೆಸ್ ಸೇರಬೇಕು. ಇದರಿಂದ ನಮಗೆ ಸಂತೋಷವಾಗುತ್ತದೆ. ಅವರು ವಿದ್ಯಾವಂತರು. ಕ್ಲೀನ್ ಇಮೇಜ್ ಹೊಂದಿದ್ದಾರೆ. ಗಾಂಧಿ ಕುಡಿ ಎಂಬ ಕಾರಣಕ್ಕಾಗಿಯೇ ಅವರಿಗೆ ಟಿಕೆಟ್​ ನೀಡಲಾಗಿಲ್ಲ ಎಂದು ಆರೋಪಿಸಿದರು.

ತಾಯಿಗೆ ಟಿಕೆಟ್​, ಪುತ್ರನಿಗೆ ಇಲ್ಲ:ಲೋಕಸಭೆ ಚುನಾವಣೆಗೆ ಬಿಜೆಪಿ 5ನೇ ಪಟ್ಟಿಯಲ್ಲಿ 111 ಅಭ್ಯರ್ಥಿಗಳನ್ನು ಈಚೆಗೆ ಅಖೈರುಗೊಳಿಸಿತ್ತು. ಅದರಲ್ಲಿ ಪಿಲಿಭಿತ್ ಲೋಕಸಭಾ ಕ್ಷೇತ್ರದಿಂದ ವರುಣ್ ಗಾಂಧಿ ಅವರನ್ನು ಕೈಬಿಡಲಾಗಿದೆ. ಅವರ ತಾಯಿ ಮನೇಕಾ ಗಾಂಧಿ ಅವರಿಗೆ ಸುಲ್ತಾನ್‌ಪುರ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. 2 ವರ್ಷಗಳ ಹಿಂದೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಮಾಜಿ ಸಚಿವ ಜಿತಿನ್ ಪ್ರಸಾದ್​ ಅವರನ್ನು ಪಿಲಿಭಿತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೂಚಿಸಲಾಗಿದೆ.

ಗಾಂಧಿ ಕುಟುಂಬದ ಫೈರ್​ಬ್ರ್ಯಾಂಡ್​ ಎಂದೇ ಗುರುತಿಸಿಕೊಂಡಿದ್ದ ವರುಣ್ ಗಾಂಧಿ ಅವರು 2009 ರಲ್ಲಿ ಚೊಚ್ಚಲ ಚುನಾವಣೆಯಲ್ಲಿ 4.19 ಲಕ್ಷ ಮತಗಳೊಂದಿಗೆ ಪಿಲಿಭಿತ್​ನಲ್ಲಿ ಗೆದಿದ್ದರು. 2014 ಮತ್ತು 2019 ರ ಚುನಾವಣೆಯಲ್ಲೂ ಅವರು ಗೆಲುವು ಸಾಧಿಸಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದರು. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತು ಪಕ್ಷದ ನಿರ್ಧಾರಗಳನ್ನು ಬಹಿರಂಗವಾಗಿ ಟೀಕಿಸುತ್ತಿದ್ದರು. ಇದು ಪಕ್ಷವನ್ನು ಹಲವು ಬಾರಿ ಮುಜುಗರಕ್ಕೀಡು ಮಾಡಿತ್ತು.

ಇನ್ನೂ, ಉತ್ತರಪ್ರದೇಶದ 80 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನು ಬಿಜೆಪಿ ಹೊಂದಿದೆ. ರಾಜ್ಯದಲ್ಲಿ ಎಲ್ಲ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19 ರಿಂದ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಜೂನ್ 1 ರಂದು ಮುಕ್ತಾಯವಾಗಲಿದೆ. ಜೂನ್​ 4 ರಂದು ಮತ ಎಣಿಕೆ ನಡೆಯಲಿದೆ. ದೇಶದಲ್ಲಿ 97 ಕೋಟಿ ನೋಂದಾಯಿತ ಮತದಾರರಿದ್ದಾರೆ.

ಇದನ್ನೂ ಓದಿ:ಲೋಕಸಭೆ ಚುನಾವಣೆ: ಏ.19ರಿಂದ 7 ಹಂತದಲ್ಲಿ ಮತದಾನ; ಜೂ.4ಕ್ಕೆ ಮತಎಣಿಕೆ

Last Updated : Mar 26, 2024, 8:00 PM IST

ABOUT THE AUTHOR

...view details