ನವದೆಹಲಿ:ಅಮೆರಿಕದ ಕೋರ್ಟ್ನಲ್ಲಿ ಸಲ್ಲಿಸಲಾಗಿರುವ ಸಿವಿಲ್ ಮೊಕದ್ದಮೆ ಬಗ್ಗೆ ಭಾರತ ಸರ್ಕಾರ ಪ್ರತಿಕ್ರಿಯೆ ನೀಡಿದೆ. "ಸಂಪೂರ್ಣವಾಗಿ ಅನಗತ್ಯ ಮತ್ತು ಆಧಾರರಹಿತ ಆರೋಪ" ಎಂದು ತಳ್ಳಿ ಹಾಕಿದೆ. ಆರೋಪಿಸಿ ಹತ್ಯೆ ಯತ್ನದ ಕುರಿತು ಅಮೆರಿಕದಲ್ಲಿ ಭಾರತ ಸರ್ಕಾರದ ವಿರುದ್ಧ ಸಲ್ಲಿಸಲಾದ ಸಿವಿಲ್ ಮೊಕದ್ದಮೆ ಬಗ್ಗೆ ಇದೊಂದು ನಿರಾಧಾರ ಆರೋಪ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಳ್ಳಿ ಹಾಕಿದೆ.
ಎಲ್ಲ ಆರೋಪಗಳು ನಿರಾದಾರ ಎಂದ ವಿದೇಶಾಂಗ ಇಲಾಖೆ: ಈ ವಾರಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ನೀಡಲಿದ್ದಾರೆ. ಈ ಬಗ್ಗೆ ವಿಶೇಷ ಬ್ರೀಫಿಂಗ್ ಮಾಡಿದ ವೇಳೆ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾತನಾಡಿ, ಪನ್ನುನ್ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.
ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬೈಡನ್ ನಡುವಿನ ದ್ವಿಪಕ್ಷೀಯ ಮಾತುಕತೆಯ ಸಮಯದಲ್ಲಿ ಖಲಿಸ್ತಾನ್ ಸಮಸ್ಯೆಯನ್ನು ಚರ್ಚಿಸಲಾಗುತ್ತದೆಯೇ ಎಂದು ಕೇಳಿದಾಗ "ನಾವು ಮೊದಲೇ ಹೇಳಿದಂತೆ, ಭಾರತ ಮತ್ತು ಅಮೆರಿಕದ ನಡುವಿನ ಪರಸ್ಪರ ಕಾಳಜಿಯ ವಿಷಯಗಳೇನೇನು ಇವೆಯೋ ಅವೆಲ್ಲವುಗಳನ್ನು ನಾವು ಭೇಟಿ ಸಂದರ್ಭದಲ್ಲಿ ಚರ್ಚೆ ಮಾಡುತ್ತೇವೆ. ಯಾವುದೇ ನಿರ್ದಿಷ್ಟ ವಿಷಯವಾಗಲಿ ಅವುಗಳ ಬಗ್ಗೆ ಸಮಾಲೋಚನೆ ಮಾಡಲಾಗುವುದು, ಆದರೆ ಏನನ್ನು ಮಾತನಾಡಲಾಗುವುದು ಎಂಬ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ನಾವು ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ ಎಂಬುದನ್ನು ಮಾತ್ರ ಖಂಡಿತವಾಗಿ ಹೇಳಬಲ್ಲೆ‘‘ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.
ಭಾರತದ ನಿಲುವು ಸ್ಪಷ್ಟ :ನಿಯೋಜಿತ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ 'ಹತ್ಯೆ' ಯತ್ನದ ಕುರಿತು ಅಮೆರಿಕದಲ್ಲಿ ಭಾರತ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿದ್ದಾರೆ ಎಂಬ ಪ್ರಶ್ನೆಗೆ ಮಿಸ್ರಿ, ನಾವು ಮೊದಲೇ ಹೇಳಿದಂತೆ, ಇವು ಸಂಪೂರ್ಣವಾಗಿ ಅನಗತ್ಯ ಮತ್ತು ಆಧಾರರಹಿತ ಆರೋಪಗಳಾಗಿವೆ. ಈಗ ಈ ನಿರ್ದಿಷ್ಟ ಪ್ರಕರಣವನ್ನು ದಾಖಲಿಸಲಾಗಿದೆ, ಈ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಬದಲಾಯಿಸುವುದಿಲ್ಲ ಎಂದರು.
ಈ ವ್ಯಕ್ತಿಯು ಪ್ರತಿನಿಧಿಸುವ ಸಂಸ್ಥೆಯು ಕಾನೂನುಬಾಹಿರ ಸಂಸ್ಥೆಯಾಗಿದೆ, 1967ರ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ ಈ ಸಂಸ್ಥೆಯನ್ನು ನಿಷೇಧಿಸಲಾಗಿದೆ. ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಕಾರಣದಿಂದ ಹೀಗೆ ಮಾಡಲಾಗಿದೆ ಎಂಬ ಅಂಶವನ್ನು ನಾನು ಒತ್ತಿಹೇಳುತ್ತೇನೆ. ಮತ್ತು ವಿಧ್ವಂಸಕ ಚಟುವಟಿಕೆಗಳು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಅಡ್ಡಿಪಡಿಸುವ ಗುರಿಯನ್ನು ಹೊಂದಿವೆ" ಎಂಬ ಅಂಶಗಳ ಬಗ್ಗೆ ಮಿಸ್ರಿ ಇದೇ ವೇಳೆ ಬೆಳಕು ಚಲ್ಲಿದರು.