ಗೋರಖಪುರ್, ಉತ್ತರ ಪ್ರದೇಶ:ಲೋಕಸಭಾ ಚುನಾವಣೆಯ ಬಳಿಕ ಮೊದಲ ಬಾರಿಗೆ, ಸಿಎಂ ಯೋಗಿ ಆದಿತ್ಯನಾಥ್ ಎರಡು ದಿನ ಕಾಲ ಗೋರಖ್‌ಪುರ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ವಾರಾಣಸಿಯಿಂದ ಗೋರಖ್‌ಪುರಕ್ಕೆ ಹೊರಡಲಿದ್ದಾರೆ. ಸಂಜೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಲಿದ್ದು ಯುಪಿಯಲ್ಲಿ ಬಿಜೆಪಿಗೆ ಹಿನ್ನೆಡೆ ಆದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಲೋಕಸಭಾ ಚುನಾವಣೆ ಬಳಿಕ ಆರ್‌ಎಸ್‌ಎಸ್ ನಾಯಕರು ಮೋದಿ ಸರ್ಕಾರ ಹಾಗೂ ಮೋದಿ ನಡೆ ಬಗ್ಗೆ ಪರೋಕ್ಷ ಹಾಗೂ ನೇರ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಮೋಹನ್ ಭಾಗವತ್ ಹಾಗೂ ಯೋಗಿ ಆದಿತ್ಯನಾಥ್ ಭೇಟಿಯಾಗುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ನಿನ್ನೆಯಷ್ಟೇ ಆರ್‌ಎಸ್‌ಎಸ್ ನಾಯಕ ಇಂದ್ರೇಶ್ ಕುಮಾರ್, ದುರಂಹಕಾರ ತೋರಿದವರನ್ನು ಶ್ರೀರಾಮ 240ಕ್ಕೆ ನಿರ್ಬಂಧಿಸಿದ್ದಾನೆ ಎಂದಿದ್ದರು. ಇದಕ್ಕೂ ಮೊದಲು ಮೋಹನ್ ಭಾಗವತ್ ಸಹ ಮೋದಿ ಹೆಸರು ಹೇಳದೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರಗಳು ಈಗ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿವೆ.
ಇನ್ನು ಎರಡು ದಿನಗಳ ಗೋರಖಪುರ ಪ್ರವಾಸ ಕೈಗೊಳ್ಳುವ ಸಿಎಂ ಯೋಗಿ ಆದಿತ್ಯನಾಥ. ಅಶ್ಫಾಕ್ ಉಲ್ಲಾ ಖಾನ್ ಮೃಗಾಲಯಕ್ಕೆ ಭೇಟಿ ನೀಡಲಿದ್ದಾರೆ. ಇಟಾವಾ ಸಫಾರಿ ಪಾರ್ಕ್‌ನಿಂದ ತರಲಾಗಿದ್ದ ಎರಡು ಸಿಂಹಗಳನ್ನು ನೋಡಲಿದ್ದು ಅವುಗಳ ಆರೋಗ್ಯ ಆಹಾರದ ಬಗ್ಗೆ ಅಧಿಕಾರಿಗಳೊಂದಿಗೆ ವಿಚಾರಿಸಲಿದ್ದಾರೆ. ಮುಖ್ಯಮಂತ್ರಿಗಳ ವಿಶೇಷ ಆಶಯ ಮತ್ತು ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿ ಮೇರೆಗೆ 2018ರಲ್ಲಿ ಭರತ್ ಮತ್ತು ಗೌರಿ ಎಂಬ ಎರಡು ಸಿಂಹಗಳನ್ನು ಗೋರಖ್‌ಪುರ ಮೃಗಾಲಯಕ್ಕೆ ತರಲಾಗಿತ್ತು.