ಚೆನ್ನೈ: ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಬಾರದು ಮತ್ತು 'ಒನ್ ನೇಷನ್ ಒನ್ ಎಲೆಕ್ಷನ್' ಯೋಜನೆಯನ್ನು ದೇಶದಲ್ಲಿ ಜಾರಿಗೆ ತರಬಾರದು ಎಂಬ ಎರಡು ಪ್ರತ್ಯೇಕ ನಿರ್ಣಯಗಳನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
ಕಳೆದ ಸೋಮವಾರ ರಾಜ್ಯಪಾಲ ಆರ್.ಎನ್. ರವಿ ಅವರ ಭಾಷಣದೊಂದಿಗೆ ತಮಿಳುನಾಡಿನ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ಪ್ರಸಕ್ತ ವರ್ಷದ ಬಜೆಟ್ ಇದೇ 19 ರಂದು ಮಂಡನೆಯಾಗಲಿದೆ. ಈ ಪರಿಸ್ಥಿತಿಯಲ್ಲಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಇಂದು ಒಂದು ರಾಷ್ಟ್ರ, ಒಂದು ಚುನಾವಣೆ ಮತ್ತು ಕ್ಷೇತ್ರ ಪುನರ್ ಸಂಘಟನೆಯ ವಿರುದ್ಧ ಪ್ರತ್ಯೇಕ ನಿರ್ಣಯಗಳನ್ನು ಪ್ರಸ್ತಾಪಿಸಿದರು. "ಒಂದು ದೇಶ ಒಂದು ಚುನಾವಣೆಯನ್ನು ಬಲವಾಗಿ ವಿರೋಧಿಸಬೇಕಿದೆ. ಜನಗಣತಿಯ ನಂತರ ಕ್ಷೇತ್ರಗಳನ್ನು ಪುನರ್ ರಚಿಸಲಾಗುವುದು ಎಂದು ಘೋಷಿಸಲಾಗಿದೆ. ಈ ಮೂಲಕ ತಮಿಳುನಾಡಿನಿಂದ ಚುನಾಯಿತರಾಗುವ ಜನಪ್ರತಿನಿಧಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಂಚು ರೂಪಿಸಿದ್ದಾರೆ. ಇವೆರಡೂ ಕ್ರಮ ಪ್ರಜಾಪ್ರಭುತ್ವ ವಿರೋಧಿಯಾಗಿವೆ" ಎಂದು ಸಿಎಂ ಹೇಳಿದರು.
"ಒಂದು ದೇಶ ಒಂದು ಚುನಾವಣೆ ಯೋಜನೆ ಸಂಪೂರ್ಣವಾಗಿ ಅಪ್ರಾಯೋಗಿಕವಾಗಿದ್ದು, ಸಂವಿಧಾನಕ್ಕೆ ವಿರುದ್ಧವಾಗಿದೆ. ಒಂದೇ ಚುನಾವಣೆಯು ಜನಪ್ರಿಯವಾಗಿ ಚುನಾಯಿತವಾದ ಶಾಸಕಾಂಗಗಳನ್ನು ಬೇಗನೆ ವಿಸರ್ಜಿಸಲು ಕಾರಣವಾಗಬಹುದು. ಯಾವುದೋ ರಾಜ್ಯದಲ್ಲಿ ಸರ್ಕಾರ ಪತನವಾದಾಗ ಏನು ಮಾಡುವುದು? ಇದೊಂದು ತಮಾಷೆಯ ವಿಷಯವಾಗಿದೆ. ಸಂಸದೀಯ ಚುನಾವಣೆಗಳನ್ನು ಕೂಡ ಸಹ ಒಂದೇ ಹಂತದಲ್ಲಿ ನಡೆಸಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಸ್ಥಳೀಯ ಸಂಸ್ಥೆಗಳು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವಾಗ, ಅವುಗಳಿಗೂ ಚುನಾವಣೆ ನಡೆಸಲಾಗುವುದು ಎಂದು ಹೇಳುವುದು ರಾಜ್ಯದ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ" ಎಂದು ಅವರು ತಿಳಿಸಿದರು.