ನವದೆಹಲಿ:ಅಬಕಾರಿ ನೀತಿ ಹಗರಣದಲ್ಲಿ ತನ್ನನ್ನು ಬಂಧಿಸುವ ಯತ್ನ, ಸರ್ಕಾರವನ್ನು ಬೀಳಿಸಲು ಬಿಜೆಪಿ ಸಂಚು ಯತ್ನದ ಆರೋಪದ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಿಲುವಳಿಯನ್ನು ಶುಕ್ರವಾರ ಮಂಡಿಸಿದರು. ಇಂದು (ಶನಿವಾರ) ಅದರ ಮೇಲೆ ಚರ್ಚೆ ನಡೆಯಲಿದೆ.
ಲೆಫ್ಟಿನೆಂಟ್ ಗವರ್ನರ್ ಅವರ ಭಾಷಣದ ವೇಳೆ ಅಡ್ಡಿ ಉಂಟು ಮಾಡಿದ ಆರೋಪದ ಮೇಲೆ 8 ಬಿಜೆಪಿ ಶಾಸಕರ ಪೈಕಿ 7 ಮಂದಿಯನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ಇದರಿಂದ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಶಾಸಕರು ವಿರೋಧ ಪಕ್ಷದ ನಾಯಕ ರಾಮ್‌ವೀರ್ ಸಿಂಗ್ ಬಿಧುರಿ ಅವರ ಸಮ್ಮುಖದಲ್ಲಿ ಶನಿವಾರ ವಿಧಾನಸಭೆಯಲ್ಲಿ ಈ ಪ್ರಸ್ತಾಪವನ್ನು ಚರ್ಚೆಗೆ ತರಲಿದ್ದಾರೆ.
70 ಸದಸ್ಯ ಬಲದ ವಿಧಾನಸಭೆಯಲ್ಲಿ ಸಿಎಂ ಕೇಜ್ರಿವಾಲ್ ಸರ್ಕಾರ ವಿಶ್ವಾಸ ಮತ ಯಾಚಿಸುತ್ತಿರುವುದು ಇದು ಎರಡನೇ ಬಾರಿ. ಪ್ರಸ್ತುತ ವಿಧಾನಸಭೆಯಲ್ಲಿ ಎಎಪಿ 62 ಶಾಸಕರನ್ನು ಹೊಂದಿದ್ದರೆ, ಬಿಜೆಪಿ 8 ಶಾಸಕರನ್ನು ಹೊಂದಿದೆ. ಹೀಗಾಗಿ ನಿಲುವಳಿ ಸಲೀಸಾಗಿ ಪಾಸ್ ಆಗಲಿದೆ. ಇದರಿಂದ ತಮ್ಮ ಸರ್ಕಾರ ಸುಭದ್ರವಾಗಿದೆ. ಶಾಸಕರ ಖರೀದಿ ಸಾಧ್ಯವಿಲ್ಲ ಎಂಬುದನ್ನು ಕೇಜ್ರಿವಾಲ್ ಸಾಬೀತು ಮಾಡಲಿದ್ದಾರೆ. ಇದರ ಜೊತೆಗೆ ಆಪ್ ಶಾಸಕರ ನಿಷ್ಠೆಯೂ ಇಲ್ಲಿ ಬಯಲಾಗಲಿದೆ. ಬಿಜೆಪಿಯ ವಿರುದ್ಧ ಹರಿಹಾಯಲು ಸದನದಲ್ಲಿ ಅವಕಾಶ ಕೂಡ ಸಿಗಲಿದೆ.
ಬಿಜೆಪಿ ವಿರುದ್ಧ ಸಿಎಂ ಕೇಜ್ರಿ 'ಖರೀದಿ' ಆರೋಪ:ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಿಲುವಳಿ ಮಂಡಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಪ್ನ ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರೂಪಾಯಿ ಆಫರ್ ಮಾಡಿದೆ. ಈ ಬಗ್ಗೆ ನಮ್ಮ ಪಕ್ಷದ ಇಬ್ಬರು ಶಾಸಕರು ನನ್ನ ಬಳಿ ದೂರಿದ್ದಾರೆ. ನನ್ನನ್ನು ಬಂಧಿಸಿ, ಸರ್ಕಾರ ಬೀಳಿಸುವುದೇ ಜೆಪಿಯ ದುರುದ್ದೇಶವಾಗಿದೆ ಎಂದು ಆರೋಪಿಸಿದರು.