ಕರ್ನಾಟಕ

karnataka

ETV Bharat / bharat

'ನಿವೃತ್ತಿ ಬಳಿಕ ಹುದ್ದೆ ಬಯಸಿದ್ದೀರಾ?' : ನೋಟಿಸ್​ ನೀಡಿದ ಚುನಾವಣಾ ಆಯುಕ್ತರ ವಿರುದ್ಧ ಕೇಜ್ರಿವಾಲ್​ ಗರಂ - KEJRIWAL FIRE ON CEC

ತಮ್ಮ ವಿಷ ಹೇಳಿಕೆಗೆ ಸ್ಪಷ್ಟನೆ ನೀಡಿದಾಗ್ಯೂ ಅದು ಸರಿಯಿಲ್ಲ ಎಂದು ಚುನಾವಣಾ ಆಯೋಗ ಮತ್ತೊಮ್ಮೆ ಸ್ಪಷ್ಟನೆ ಕೇಳಿದ್ದಕ್ಕೆ, ಅರವಿಂದ್​ ಕೇಜ್ರಿವಾಲ್​ ಆಯುಕ್ತರ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ.

ಅರವಿಂದ್​ ಕೇಜ್ರಿವಾಲ್​ , ಚುನಾವಣಾ ಆಯುಕ್ತ ರಾಜೀವ್​​ ಕುಮಾರ್​
ಅರವಿಂದ್​ ಕೇಜ್ರಿವಾಲ್​ , ಚುನಾವಣಾ ಆಯುಕ್ತ ರಾಜೀವ್​​ ಕುಮಾರ್​ (ETV Bharat)

By ETV Bharat Karnataka Team

Published : Jan 30, 2025, 3:53 PM IST

ನವದೆಹಲಿ:ಹರಿಯಾಣದ ಬಿಜೆಪಿ ಸರ್ಕಾರ ಯಮುನಾ ನದಿಯಲ್ಲಿ ವಿಷ ಬೆರೆಸುತ್ತಿದೆ ಎಂಬ ವಿವಾದಿತ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ನೋಟಿಸ್​ ನೀಡಿದ್ದಕ್ಕೆ ದೆಹಲಿ ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ನನಗೆ ನೋಟಿಸ್ ಕಳುಹಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಈ ಮೂಲಕ ಆಯೋಗದ ವಿಶ್ವಾಸಾರ್ಹತೆಯನ್ನು ನಾಶ ಮಾಡಿದ್ದಾರೆ ಎಂದು" ಎಎಪಿ ಮುಖ್ಯಸ್ಥ ಆರೋಪಿಸಿದ್ದಾರೆ.

ಗುರುವಾರ ಇಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, "ರಾಜೀವ್​ಕುಮಾರ್ ಕೇಂದ್ರ ಚುನಾವಣಾ ಆಯೋಗದ ಮೇಲಿನ ವಿಶ್ವಾಸವನ್ನು ಹಾಳು ಮಾಡಿದ್ದಾರೆ. ನಿವೃತ್ತಿಯ ನಂತರ ಬಿಜೆಪಿಯಿಂದ ಮಹತ್ವದ ಹುದ್ದೆ ಪಡೆಯುವ ಬಯಕೆ ಹೊಂದಿದ್ದಾರೆ. ಹೀಗಾಗಿ, ವಿಪಕ್ಷ ನಾಯಕರ ಹೇಳಿಕೆಗಳ ವಿರುದ್ಧ ನೋಟಿಸ್​ ಜಾರಿ ಮಾಡುತ್ತಿದ್ದಾರೆ" ಎಂದು ವೈಯಕ್ತಿಕ ದಾಳಿ ನಡೆಸಿದ್ದಾರೆ.

"ರಾಜೀವ್​ ಅವರು ಆಯುಕ್ತರಾಗಿ ಚುನಾವಣಾ ಆಯೋಗವನ್ನು ನಾಶ ಮಾಡಿದ್ದಾರೆ. ಈ ಹಿಂದಿನ ಯಾರೊಬ್ಬರೂ ಹೀಗೆ ಮಾಡಿರಲಿಲ್ಲ. ಒಂದು ವೇಳೆ ಅವರು ರಾಜಕೀಯ ಮಾಡಲು ಬಯಸಿದಲ್ಲಿ ದೆಹಲಿಯ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಬಹುದು" ಎಂದು ಪಂಥಾಹ್ವಾನ ನೀಡಿದರು.

ಯಮುನಾ ನೀರು ಕುಡಿಯಲು ಸವಾಲು :ಹರಿಯಾಣ ಸಿಎಂ ನಯಾಬ್​ ಸಿಂಗ್​ ಸೈನಿ ಅವರು ನಿನ್ನೆ ಯಮುನಾ ನದಿ ತಟದಲ್ಲಿ ನೀರು ಕುಡಿದಿದ್ದನ್ನು ಟೀಕಿಸಿದ ಕೇಜ್ರಿವಾಲ್​, "ಹರಿಯಾಣ ಸಿಎಂ ನೀರು ಕುಡಿದಂತೆ ನಾಟಕವಾಡಿದರು. ಒಂದು ಗುಟುಕು ಸಹಿತ ಕುಡಿಯದೆ ಉಗಿದರು. ಅದರಲ್ಲಿ ವಿಷವಿದೆ ಎಂದು ಅವರಿಗೂ ಗೊತ್ತು. ಕೇಂದ್ರ ಗೃಹ ಸಚಿವ ಅಮಿತ್​ ಶಾ, ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್, ಹರಿಯಾಣ ಸಿಎಂ ನಯಾಬ್ ಸೈನಿ ಮತ್ತು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಗೆ ನದಿ ನೀರನ್ನು ಕಳುಹಿಸುವೆ. ಅದನ್ನು ಕುಡಿಯಲಿ" ಎಂದು ಸವಾಲು ಹಾಕಿದರು.

"ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ದೆಹಲಿ ನಿವಾಸಿಗಳ ಜೀವನದ ಜೊತೆ ಆಟವಾಡುತ್ತಿದ್ದಾರೆ. ಅಮೋನಿಯಾ ಮಿಶ್ರಿತ ಕಲುಷಿತ ನೀರನ್ನು ಜನರಿಗೆ ಸರಬರಾಜು ಮಾಡುತ್ತಿದ್ದಾರೆ. ನಾನು ಜೀವಂತ ಇರುವವರೆಗೂ ದೆಹಲಿ ಜನರ ರಕ್ಷಣೆ ಮಾಡುವೆ. ಅಂತಹ ನೀರನ್ನು ಕುಡಿಯಲು ಬಿಡುವುದಿಲ್ಲ. ಎರಡು ದಿನಗಳಲ್ಲಿ ನನ್ನನ್ನು ಬಂಧಿಸುವ ಸಾಧ್ಯತೆ ಇದೆ" ಎಂದು ಯಾರ ಹೆಸರನ್ನೂ ಹೇಳದೆ ಆರೋಪಿಸಿದರು.

ಕೇಜ್ರಿ ಉತ್ತರ ಸರಿಯಿಲ್ಲ - ಆಯೋಗ :ವಿಷ ಬೆರೆಸಿದ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಲು ಸೂಚಿಸಿ ನೀಡಿದ್ದ ನೋಟಿಸ್​​ಗೆ ಅರವಿಂದ್​ ಕೇಜ್ರಿವಾಲ್​ ಸರಿಯಾದ ಉತ್ತರ ನೀಡಿಲ್ಲ ಎಂದು ಚುನಾವಣಾ ಆಯೋಗ, ಮತ್ತೊಮ್ಮೆ ಜನವರಿ 31 ರೊಳಗೆ ಸ್ಪಷ್ಟವಾಗಿ ಪ್ರತಿಕ್ರಿಯಿಸಲು ಸೂಚಿಸಿದೆ. ಇಲ್ಲವಾದಲ್ಲಿ ವಿವಾದಿತ ಹೇಳಿಕೆಯ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ತಮ್ಮ ವಿಷಕಾರಿ ಹೇಳಿಕೆಗೆ ಸ್ಪಷ್ಟನೆ ನೀಡಿ ಅರವಿಂದ್​ ಕೇಜ್ರಿವಾಲ್​ ಅವರು, 14 ಪುಟಗಳ ಉತ್ತರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ. ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಹರಿಯಾಣದಿಂದ ಬರುತ್ತಿರುವ ನೀರು ತೀವ್ರ ಕಲುಷಿತವಾಗಿದೆ. ಜನರು ಇದನ್ನ ಕುಡಿದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಲಿದ್ದಾರೆ ಎಂದು ಉಲ್ಲೇಖಿಸಿದ್ದಾಗಿ ಅವರು ತಿಳಿಸಿದ್ದಾರೆ.

ಓದಿ:ಯಮುನಾ ನದಿ ನೀರು ಕುಡಿದು ಕೇಜ್ರಿವಾಲ್​ 'ವಿಷ' ಆರೋಪಕ್ಕೆ ತಿರುಗೇಟು ನೀಡಿದ ಹರಿಯಾಣ ಸಿಎಂ

ಯಮುನೆಗೆ ವಿಷ ಹೇಳಿಕೆ ರಾಜ್ಯಕ್ಕೆ ಅಲ್ಲ, ದೇಶಕ್ಕೆ ಮಾಡಿದ ಅವಮಾನ: ಕೇಜ್ರಿವಾಲ್​ ವಿರುದ್ಧ ಮೋದಿ ಗುಡುಗು

ಉದ್ಯೋಗ ಸೃಷ್ಟಿಯ ಜೊತೆಗೆ ನಿರುದ್ಯೋಗ ಕೊನೆಗೊಳಿಸುವುದು ನಮ್ಮ ಮೊದಲ ಆಯ್ಕೆ: ಕೇಜ್ರಿವಾಲ್ ಪ್ರತಿಜ್ಞೆ

ABOUT THE AUTHOR

...view details