ಕರ್ನಾಟಕ

karnataka

ETV Bharat / bharat

ಛತ್ತೀಸ್​ಗಢದಲ್ಲಿ ನಕ್ಸಲರ ಅಟ್ಟಹಾಸ: ಬಿಜೆಪಿ ಮುಖಂಡನ ಅಪಹರಿಸಿ ಕೊಲೆ - Naxal Attack

ಬಿಜೆಪಿ ಮುಖಂಡ ಕೈಲಾಶ್​ನಾಗ್ ಎಂಬುವರನ್ನು ನಕ್ಸಲರು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಛತ್ತೀಸ್​ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.

Chhattisgarh: Naxalites Killed BJP Leader After Kidnapping In Bijapur
ಛತ್ತೀಸ್​ಗಢದಲ್ಲಿ ನಕ್ಸಲರ ಅಟ್ಟಹಾಸ: ಬಿಜೆಪಿ ಮುಖಂಡನ ಅಪಹರಿಸಿ ಹತ್ಯೆ

By ETV Bharat Karnataka Team

Published : Mar 6, 2024, 9:29 PM IST

ಬಿಜಾಪುರ (ಛತ್ತೀಸ್​ಗಢ):ಛತ್ತೀಸ್​ಗಢದ ಬಿಜಾಪುರ ಜಿಲ್ಲೆಯಲ್ಲಿ ಮತ್ತೆ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಬಿಜೆಪಿ ಮುಖಂಡ ಕೈಲಾಶ್​ನಾಗ್ ಎಂಬುವರನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಬುಧವಾರ ನಡೆದಿದೆ. ಇದರಿಂದ ಸ್ಥಳೀಯ ಜನರಲ್ಲಿ ಆತಂಕ ಮನೆ ಮಾಡಿದೆ.

ಕೊಲೆಗೀಡಾದ ಕೈಲಾಶ್​ನಾಗ್, ಬಿಜಾಪುರದ ಜಂಗ್ಲಾ ನಿವಾಸಿಯಾಗಿದ್ದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಇವರು ಪಕ್ಷದ ವ್ಯಾಪಾರ ಘಟಕದ ವಿಭಾಗೀಯ ಉಪಾಧ್ಯಕ್ಷರಾಗಿದ್ದರು. ಇಂದು (ಬುಧವಾರ) ಸಂಜೆ ಕೊಟ್ಮೆಟಾ ಪ್ರದೇಶದಿಂದ ಕೈಲಾಶ್​ನಾಗ್ ಅವರನ್ನು ನಕ್ಸಲರು ಅಪಹರಿಸಿದ್ದರು. ಬಳಿಕ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಕೋಟ್ಮೆಟಾ ಅರಣ್ಯದಲ್ಲಿ ಹೊಂಡ ನಿರ್ಮಾಣ ಕಾಮಗಾರಿಯಲ್ಲಿ ಈ ಬಿಜೆಪಿ ಮುಖಂಡ ತೊಡಗಿದ್ದರು. ಈ ವೇಳೆ, ಜೆಸಿಬಿಗೂ ಮಾವೋವಾದಿಗಳು ಬೆಂಕಿ ಹಚ್ಚಿದ್ದರು.

ಈ ಘಟನೆ ಬಗ್ಗೆ ಜಿಲ್ಲಾ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್ ಮಾತನಾಡಿ, ಬಿಜೆಪಿ ಮುಖಂಡ ಕೈಲಾಶ್​ನಾಗ್ ಕೊಟ್ಮೆಟಾ ಪ್ರದೇಶದಲ್ಲಿ ಹೊಂಡ ನಿರ್ಮಿಸುತ್ತಿದ್ದಾಗ ನಕ್ಸಲರು ಅಪಹರಿಸಿದ್ದರು. ನಂತರ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.

ಬಿಜಾಪುರದಲ್ಲಿ ಸತತ ಎರಡನೇ ಕೊಲೆ: ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರಿಂದ ನಡೆದ ಸತತ ಎರಡನೇ ಹತ್ಯೆಯ ಪ್ರಕರಣ ಇದಾಗಿದೆ. ಇದೇ ಮಾರ್ಚ್ 1ರ ಶುಕ್ರವಾರ ರಾತ್ರಿ ಬಿಜೆಪಿ ಮುಖಂಡ ತಿರುಪತಿ ಕಟ್ಲಾ ಎಂಬುವರನ್ನೂ ಸಹ ನಕ್ಸಲರು ಕೊಲೆ ಮಾಡಿದ್ದರು. ಅಂದು ತಿರುಪತಿ ಕಟ್ಲ ಮದುವೆ ಸಮಾರಂಭದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ನಕ್ಸಲರು ದಾಳಿ ಮಾಡಿದ್ದರು. ಅವರ ಕುತ್ತಿಗೆ ಮತ್ತು ಎದೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿದ್ದರು. ಇದಾದ ಐದೇ ದಿನಗಳಲ್ಲಿ ಕೈಲಾಶ್​ನಾಗ್ ಅವರನ್ನು ಹತ್ಯೆ ಮಾಡುವ ಮೂಲಕ​ ನಕ್ಸಲರು ರಕ್ತ ಹರಿಸಿದ್ದಾರೆ.

ಬಿಜೆಪಿಯ ನಾಯಕರ ಸರಣಿ ಹತ್ಯೆಗಳು:ಬಸ್ತಾರ್‌ ವಿಭಾಗದಲ್ಲಿ ನಕ್ಸಲರು ನಿರಂತರವಾಗಿ ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷದಲ್ಲಿ ನಕ್ಸಲರಿಂದ ಸರಣಿ ಹತ್ಯೆಗಳು ಸಹ ನಡೆದಿವೆ. ಇವುಗಳ ಮಾಹಿತಿ ಇಲ್ಲಿದೆ.

  • ಬಿಜಾಪುರದಲ್ಲಿ 2023ರ ಫೆಬ್ರವರಿ 5ರಂದು ನೀಲಕಂಠ ಕಾಕೆಮ್ ಹತ್ಯೆ.
  • ನಾರಾಯಣಪುರದಲ್ಲಿ 2023ರ ಫೆಬ್ರವರಿ 10ರಂದು ಬಿಜೆಪಿ ನಾಯಕ ಸಾಗರ್ ಕೊಲೆ.
  • ದಾಂತೇವಾಡದಲ್ಲಿ 2023ರ ಫೆಬ್ರವರಿ 11ರಂದು ರಾಮಧರ್ ಅಲಾಮಿ ಹತ್ಯೆ.
  • 2023ರ ಮಾರ್ಚ್ 29ರಂದು ರಾಮ್ಜಿ ದೋಡಿ ಕೊಲೆ.
  • 2023ರ ಜೂನ್ 21ರಂದು ಬಿಜೆಪಿ ನಾಯಕ ಅರ್ಜುನ್ ಕಾಕಾ ಹತ್ಯೆ.
  • ಮೊಹ್ಲಾ ಮನ್‌ಪುರದಲ್ಲಿ 2023ರ ಅಕ್ಟೋಬರ್ 20ರಂದು ಬಿಜೆಪಿ ಕಾರ್ಯಕರ್ತ ಬಿರ್ಜು ತಾರಾಮ್ ಹತ್ಯೆ.
  • ನಾರಾಯಣಪುರದಲ್ಲಿ 2023ರ ನವೆಂಬರ್ 4ರಂದು ಬಿಜೆಪಿ ನಾಯಕ ರತನ್ ದುಬೆ ಕೊಲೆ.

ABOUT THE AUTHOR

...view details