ಸಿಂಧುದುರ್ಗ (ಮಹಾರಾಷ್ಟ್ರ): ಎಂಟು ತಿಂಗಳ ಹಿಂದೆಯಷ್ಟೇ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ರಾಜ್‌ಕೋಟ್‌ನಲ್ಲಿ ನಿರ್ಮಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದು ಬಿದ್ದಿದೆ. ಡಿಸೆಂಬರ್ 4, 2023 ರಂದು ನೌಕಾಪಡೆಯ ದಿನದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆ ಅನಾವರಣಗೊಳಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಏಕನಾಥ ಶಿಂಧೆ, ಘಟನೆ ದುರದೃಷ್ಟಕರ ಎಂದು ತಿಳಿಸಿದ್ದಾರೆ. ವಿರೋಧ ಪಕ್ಷಗಳಿಗೆ ನಮ್ಮನ್ನು ಟೀಕಿಸುವ ಹಕ್ಕಿದೆ. ಆ ಬಗ್ಗೆ ನಾನು ಯಾವುದೇ ಕಮೆಂಟ್ ಮಾಡಲು ಬಯಸುವುದಿಲ್ಲ. ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಷ್ಟ್ರಕ್ಕೆ ದೇವರಿದ್ದಂತೆ. ಈ ಪ್ರತಿಮೆಯನ್ನು ನೌಕಾಪಡೆ ನಿರ್ಮಿಸಿದೆ ಮತ್ತು ವಿನ್ಯಾಸ ಕೂಡಾ ನೌಕಾಪಡೆಯದ್ದೇ ಎಂದು ಶಿಂಧೆ ಹೇಳಿದ್ದಾರೆ.
"ಗಂಟೆಗೆ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಪ್ರತಿಮೆಗೆ ಹಾನಿಯಾಗಿದೆ ಎಂದು ಗೊತ್ತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ನೌಕಾಪಡೆಯ ಅಧಿಕಾರಿಗಳು ಮತ್ತು ಸಚಿವ ರವೀಂದ್ರ ಚವ್ಹಾಣ್ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ನಾವು ತಕ್ಷಣ ಪ್ರತಿಮೆಯನ್ನು ಮರುನಿರ್ಮಾಣ ಮಾಡುತ್ತೇವೆ" ಎಂದು ಅವರು ಇದೇ ವೇಳೆ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸಿಎಂ ಶಿಂಧೆ ಇದೇ ವೇಳೆ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ. ಪಿಡಬ್ಲ್ಯೂಡಿ ಖಾತೆಯನ್ನು ಹೊಂದಿರುವ ಸಿಂಧುದುರ್ಗದ ಉಸ್ತುವಾರಿ ಸಚಿವ ರವೀಂದ್ರ ಚವ್ಹಾಣ್, ಸಿಂಧುದುರ್ಗದಲ್ಲಿ ಎಂ/ಎಸ್ ಆರ್ಟಿಸ್ಟ್ರಿ ಸಂಸ್ಥೆಯ ಮಾಲೀಕ ಜಯದೀಪ್ ಆಪ್ಟೆ ಮತ್ತು ರಚನಾತ್ಮಕ ಸಲಹೆಗಾರ ಚೇತನ್ ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರತಿಮೆ ಸ್ಥಾಪನೆಗೆ ಮಹಾರಾಷ್ಟ್ರ ಸರ್ಕಾರ 2.36 ಕೋಟಿ ರೂ.ಗಳನ್ನು ನೌಕಾಪಡೆಗೆ ನೀಡಿದೆ ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಆದರೆ, ಕಲಾವಿದರ ಆಯ್ಕೆ, ವಿನ್ಯಾಸದ ಸಂಪೂರ್ಣ ವಿಧಾನವನ್ನು ನೌಕಾಪಡೆಯ ಅಧಿಕಾರಿಗಳು ಮಾಡಿದ್ದಾರೆ. ಸೆಪ್ಟೆಂಬರ್ 8, 2023 ರಂದು ವರ್ಕ್ ಆರ್ಡರ್ ನೀಡಲಾಗಿತ್ತು ಎಂದು ಚವ್ಹಾಣ್ ಮಾಹಿತಿ ನೀಡಿದ್ದಾರೆ.
ಕುಸಿತದ ತನಿಖೆಗೆ ಆದೇಶ: ಏತನ್ಮಧ್ಯೆ, ಭಾರತೀಯ ನೌಕಾಪಡೆಯು ಪ್ರತಿಮೆಯ ಕುಸಿತದ ಬಗ್ಗೆ ತನಿಖೆಗೆ ಆದೇಶಿಸಿದೆ. ಪ್ರತಿಮೆಯ ಕುಸಿತದ ಕಾರಣವನ್ನು ತಕ್ಷಣವೇ ತನಿಖೆ ಮಾಡಲು ತಂಡವನ್ನು ನಿಯೋಜಿಸಿದೆ ಮತ್ತು ಪ್ರತಿಮೆಯನ್ನು ಸರಿಪಡಿಸಲು, ಮರುಸ್ಥಾಪಿಸಲು ಕ್ರಮಗಳನ್ನು ಪ್ರಾರಂಭಿಸಿದೆ ಎಂದು ನೌಕಾಪಡೆ ಹೇಳಿದೆ.
ಹೊಸ ಪ್ರತಿಮೆ ಸ್ಥಾಪನೆಗೆ ಬದ್ಧ:ಹೊಸ ಪ್ರತಿಮೆ ಸ್ಥಾಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮಹಾರಾಷ್ಟ್ರ ಸಚಿವ ದೀಪಕ್ ಕೇಸರ್ಕರ್ ಹೇಳಿದ್ದಾರೆ. ಘಟನೆಯ ಬಗ್ಗೆ ನನ್ನ ಬಳಿ ಎಲ್ಲಾ ವಿವರಗಳಿಲ್ಲ. ಆದಾಗ್ಯೂ, ಪಿಡಬ್ಲ್ಯೂಡಿ ಸಚಿವ ರವೀಂದ್ರ ಚವ್ಹಾಣ್, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ" ಎಂದು ಕೇಸರ್ಕರ್ ತಿಳಿಸಿದ್ದಾರೆ.
"ನಾವು ಅದೇ ಸ್ಥಳದಲ್ಲಿ ಹೊಸ ಪ್ರತಿಮೆಯನ್ನು ಸ್ಥಾಪಿಸಲು ಬದ್ಧರಾಗಿದ್ದೇವೆ. ಈ ಪ್ರತಿಮೆಯನ್ನು ಪ್ರಧಾನಿ ಮೋದಿ ಅವರು ಅನಾವರಣಗೊಳಿಸಿದ್ದರು, ಸಮುದ್ರ ಕೋಟೆಯನ್ನು ನಿರ್ಮಿಸುವಲ್ಲಿ ಶಿವಾಜಿ ಮಹಾರಾಜರ ದೂರದೃಷ್ಟಿಯ ಪ್ರಯತ್ನಗಳಿಗೆ ಗೌರವ ಸಲ್ಲಿಸುತ್ತದೆ. ಈ ವಿಷಯವನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪರಿಹರಿಸಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ." ಕೇಸರ್ಕರ್ ಹೇಳಿದ್ದಾರೆ.
ಪ್ರತಿಮೆ ನಿರ್ಮಾಣಕಾರನ ವಿರುದ್ಧ ಕ್ರಮಕ್ಕೆ ಎನ್ಸಿಪಿ ಶರದ್ ಪವಾರ್ ಪಕ್ಷದ ಒತ್ತಾಯ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಶರದ್ಚಂದ್ರ ಪವಾರ್) ಸಂಸದೆ ಸುಪ್ರಿಯಾ ಸುಳೆ ಪ್ರತಿಮೆ ನಿರ್ಮಿಸಿದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದಿದೆ, ಪ್ರತಿಮೆಯನ್ನು ಸ್ಥಾಪಿಸುವ ಕೆಲಸವನ್ನು ಥಾಣೆಯ ಗುತ್ತಿಗೆದಾರರಿಗೆ ನೀಡಲಾಗಿದೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸುತ್ತಿದ್ದೇನೆ ಎಂದು ಸುಪ್ರಿಯಾ ಸುಳೆ ಎಕ್ಸ್ ಪೋಸ್ಟ್ನಲ್ಲಿ ಮಾಡಿದ ಸಂದೇಶದಲ್ಲಿ ಒತ್ತಾಯಿಸಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾದ ಸಂಭಾಜಿ ಛತ್ರಪತಿ ಘಟನೆಯನ್ನು ದುರದೃಷ್ಟಕರ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರನ್ನು ಅವಮಾನಿಸುವುದನ್ನು ನಾವು ಸಹಿಸುವುದಿಲ್ಲ ಎಂದು ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಗುಡುಗಿದ್ದಾರೆ.
ಇದನ್ನು ಓದಿ:ರೈತರ ಪ್ರತಿಭಟನೆಯನ್ನು ಬಾಂಗ್ಲಾ ದಂಗೆಗೆ ಹೋಲಿಸಿದ ಕಂಗನಾ: ಸ್ವಪಕ್ಷ ಸೇರಿ ಹಲವು ರೈತ ಸಂಘಟನೆಗಳ ವಿರೋಧ - Kangana Ranaut Statement