ನವದೆಹಲಿ:ನಿರೀಕ್ಷೆಯಂತೆ ಕೇಂದ್ರ ಸರ್ಕಾರ ವಕ್ಫ್ ಮಂಡಳಿ ತಿದ್ದುಪಡಿ ವಿಧೇಯಕವನ್ನು ಲೋಕಸಭೆಯಲ್ಲಿ ಇಂದು (ಗುರುವಾರ) ಮಂಡಿಸಿದೆ. ವಕ್ಫ್ ಮಂಡಳಿಯಲ್ಲಿ ಹಲವಾರು ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದರೆ, ಇದಕ್ಕೆ ಪ್ರತಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿವೆ. ಇದರಿಂದ ಕಲಾಪದ ವೇಳೆ ಗದ್ದಲ ಉಂಟಾಯಿತು.
ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ವಕ್ಫ್ ತಿದ್ದುಪಡಿ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿ, ಚರ್ಚೆಗೆ ಆಹ್ವಾನಿಸಿದರು. ವಿಧೇಯಕಕ್ಕೆ ಎನ್ಡಿಎ ಕೂಟದ ಮಿತ್ರ ಪಕ್ಷಗಳಾದ ತೆಲುಗು ದೇಶಂ ಪಕ್ಷ (ಟಿಡಿಪಿ), ಸಂಯುಕ್ತ ಜನತಾದಳ (ಜೆಡಿಯು) ಬೆಂಬಲ ವ್ಯಕ್ತಪಡಿಸಿದರೆ, ಕಾಂಗ್ರೆಸ್, ಶಿವಸೇನೆ (ಉದ್ಧವ್ ಬಣ), ಎನ್‌ಸಿಪಿ (ಶರದ್ ಪವಾರ್ ಬಣ), ಸಮಾಜವಾದಿ, ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ವಿರೋಧಿಸಿದವು.
ಹಕ್ಕಿನಿಂದ ವಂಚಿತರಾದವರಿಗಾಗಿ ಮಸೂದೆ: ವಿಧೇಯಕ ಮಂಡಿಸಿ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, "ಯಾವುದೇ ಧಾರ್ಮಿಕ ಸಂಸ್ಥೆಯ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಮಸೂದೆಯಿಂದ ಯಾವುದೇ ಧಾರ್ಮಿಕ ಸಂಸ್ಥೆಯ ಸ್ವಾತಂತ್ರ್ಯಕ್ಕೆ ಧಕ್ಕೆ ಇಲ್ಲ. ಯಾರ ಹಕ್ಕನ್ನೂ ಕಿತ್ತುಕೊಳ್ಳದೆ, ಹಕ್ಕಿನಿಂದ ವಂಚಿತರಾದವರಿಗಾಗಿ ಮಸೂದೆ ತರಲಾಗಿದೆ. ಸಾಚಾರ್ ವರದಿ ಆಧರಿಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಸಮಿತಿ ರಚಿಸಿದ್ದೇ ಕಾಂಗ್ರೆಸ್. ಇದೀಗ ಆ ಪಕ್ಷವೇ ರಾಜಕೀಯ ಕಾರಣಕ್ಕಾಗಿ ಸಮಿತಿ ಶಿಫಾರಸುಗಳನ್ನು ವಿರೋಧಿಸುತ್ತಿದೆ" ಎಂದು ಟೀಕಿಸಿದರು.
ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ- ಕಾಂಗ್ರೆಸ್:ಸರ್ಕಾರ ಮಂಡಿಸಿದ ತಿದ್ದುಪಡಿ ವಿಧೇಯಕವನ್ನು ಕಾಂಗ್ರೆಸ್, ಸಮಾಜವಾದಿ, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಸೇರಿದಂತೆ ಹಲವು ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್, "ವಿಧೇಯಕವು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ" ಎಂದು ಆರೋಪಿಸಿದರು.