ಕೋಝಿಕ್ಕೋಡ್(ಕೇರಳ): ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆ ಕುರಿತ ಪೋಸ್ಟ್‌ವೊಂದಕ್ಕೆ ಫೇಸ್‌ಬುಕ್‌ನಲ್ಲಿ ಕಾಮೆಂಟ್ ಮಾಡಿರುವ ಕಾರಣಕ್ಕೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಕ್ಯಾಲಿಕಟ್ (ಎನ್‌ಐಟಿ) ಮಹಿಳಾ ಪ್ರಾಧ್ಯಾಪಕಿ ಎ.ಶೈಜಾ ಎಂಬವರ ವಿರುದ್ಧ ಕೇರಳ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಸ್‌ಎಫ್‌ಐ, ಕೆಎಸ್‌ಯು, ಎಂಎಸ್‌ಎಫ್ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಾಧ್ಯಾಪಕಿ ವಿರುದ್ಧ ದೂರು ನೀಡಿದ್ದವು. ಐಪಿಸಿ ಸೆಕ್ಷನ್ 153 ಅಡಿಯಲ್ಲಿ (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜನವರಿ 30ರಂದು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಪ್ರಾಧ್ಯಾಪಕಿ ಶೈಜಾ ಅವರು ಫೇಸ್‌ಬುಕ್‌ನಲ್ಲಿ, "ಭಾರತವನ್ನು ಉಳಿಸಿದ್ದಕ್ಕಾಗಿ ಗೋಡ್ಸೆ ಬಗ್ಗೆ ಹೆಮ್ಮೆ ಪಡಬೇಕು" ಎಂದು ಕಾಮೆಂಟ್ ಮಾಡಿದ್ದರು. ಹಿಂದೂ ಮಹಾಸಭಾ ಕಾರ್ಯಕರ್ತ ನಾಥೂರಾಮ್ ವಿನಾಯಕ್ ಗೋಡ್ಸೆ ಭಾರತದಲ್ಲಿ ಅನೇಕರ ಹೀರೋ ಎಂದು ಗೋಡ್ಸೆ ಫೋಟೋ ಪೋಸ್ಟ್ ಮಾಡಿದ್ದ ವಕೀಲ ಕೃಷ್ಣ ರಾಜ್ ಎಂಬವರ ಪೋಸ್ಟ್‌ಗೆ ಪ್ರಾಧ್ಯಾಪಕಿ ಕಾಮೆಂಟ್ ಮಾಡಿದ್ದಾರೆ.