ಕರ್ನಾಟಕ

karnataka

ETV Bharat / bharat

ಮೂಸಿ ನದಿ ಯೋಜನೆ ಹೆಸರಲ್ಲಿ ಭೂಮಿ ಕಬಳಿಸುವ ಹುನ್ನಾರ: ಬಿಆರ್​ಎಸ್ ಎಂಎಲ್​ಸಿ ಕವಿತಾ - MUSI RIVER PROJECT

ಮೂಸಿ ನದಿ ಅಭಿವೃದ್ಧಿ ಯೋಜನೆ ದುಡ್ಡು ಮಾಡುವ ರಿಯಲ್ ಎಸ್ಟೇಟ್ ಯೋಜನೆಯಾಗಿದೆ ಎಂದು ಬಿಆರ್​ಎಸ್ ಎಂಎಲ್​ಸಿ ಕವಿತಾ ಆರೋಪಿಸಿದ್ದಾರೆ.

ಬಿಆರ್​ಎಸ್ ಎಂಎಲ್​ಸಿ ಕವಿತಾ
ಬಿಆರ್​ಎಸ್ ಎಂಎಲ್​ಸಿ ಕವಿತಾ (IANS)

By ETV Bharat Karnataka Team

Published : 5 hours ago

ಹೈದರಾಬಾದ್(ತೆಲಂಗಾಣ): ಮೂಸಿ ರಿವರ್ ಫ್ರಂಟ್ ಅಭಿವೃದ್ಧಿ ಯೋಜನೆಯು ರಿಯಲ್ ಎಸ್ಟೇಟ್ ದಂಧೆಗಾಗಿ ಸಾವಿರಾರು ಜನರನ್ನು ಒಕ್ಕಲೆಬ್ಬಿಸುವ ತಂತ್ರ ಎಂದು ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್) ಎಂಎಲ್​ಸಿ ಕೆ.ಕವಿತಾ ಬುಧವಾರ ಆರೋಪಿಸಿದ್ದಾರೆ. ಯೋಜನೆಯಿಂದ ಬಾಧಿತರಾಗುವ ಜನರ ಹಕ್ಕುಗಳಿಗಾಗಿ ಬಿಆರ್​ಎಸ್​ ಹೋರಾಡಲಿದೆ ಎಂದು ಅವರು ಹೇಳಿದರು.

"ಮೂಸಿ ಯೋಜನೆಗೆ 1.5 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ ಎಂದು ಸ್ವತಃ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಹೇಳಿದ್ದಾರೆ. ರಾಜ್ಯ ಸರ್ಕಾರವು ವಿಶ್ವ ಬ್ಯಾಂಕಿನಿಂದ 4,100 ಕೋಟಿ ರೂ.ಗಳ ಸಾಲ ಕೇಳಿದೆ ಮತ್ತು 14,100 ಕೋಟಿ ರೂ. ನೀಡುವಂತೆ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮನವಿ ಮಾಡಿದೆ" ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

"ಯೋಜನೆಗೆ ಸಂಬಂಧಿಸಿದ ಕೆಲ ಪ್ರಮುಖ ದಾಖಲೆಗಳನ್ನು ಸಾರ್ವಜನಿಕಗೊಳಿಸಿದ ಅವರು, ಇದು ಯಾವುದೇ ಸ್ಪಷ್ಟತೆ, ಪಾರದರ್ಶಕತೆ ಇಲ್ಲದ ಬೃಹತ್ ಸಾಲದ ಮತ್ತು ಸ್ಥಳಾಂತಗೊಳ್ಳುವವರಿಗೆ ಯಾವುದೇ ಪರಿಹಾರವಿಲ್ಲದ ಯೋಜನೆಯಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಮೂಸಿ ಯೋಜನೆಗೆ ವಿಶ್ವಬ್ಯಾಂಕ್‌ನಿಂದ ಯಾವುದೇ ನೆರವು ಕೋರಿಲ್ಲ ಮತ್ತು ಡಿಪಿಆರ್ ಸಿದ್ಧವಾಗಿಲ್ಲ ಎಂದು ಶಾಸಕಾಂಗ ವ್ಯವಹಾರಗಳ ಸಚಿವ ಡಿ.ಶ್ರೀಧರ್ ಬಾಬು ಸದನಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸಿದ್ದಾರೆ" ಎಂದು ಅವರು ಆರೋಪಿಸಿದರು.

"ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ ಮತ್ತು ವಿಶ್ವ ಬ್ಯಾಂಕ್​ನಿಂದ 4,100 ಕೋಟಿ ರೂ.ಗಳನ್ನು ಕೋರಲಾಗಿದೆ ಎಂದು ಸೆಪ್ಟೆಂಬರ್ 19ರಂದು ಕಾಂಗ್ರೆಸ್ ಪಕ್ಷ ಹೇಳಿದೆ. ಅಕ್ಟೋಬರ್ 4ರಂದು ಡಿಪಿಆರ್​ಗಾಗಿ ಸಲಹೆಗಾರರನ್ನು ನೇಮಿಸಿಕೊಳ್ಳಲು ಸರ್ಕಾರ ಅನುಮೋದನೆ ನೀಡಿದೆ. ಮತ್ತೆ ಡಿಸೆಂಬರ್ 17ರಂದು ಸರ್ಕಾರವೇ ವಿಧಾನಸಭೆಯಲ್ಲಿ ಡಿಪಿಆರ್ ಸಿದ್ಧವಾಗಿಲ್ಲ ಎಂದು ಹೇಳಿತು" ಎಂದು ಕವಿತಾ ತಿಳಿಸಿದರು.

ಡಿಪಿಆರ್ ಸಿದ್ಧವಾಗಿದೆ ಎಂದು ವಿಶ್ವಬ್ಯಾಂಕ್‌ಗೆ ಕಳುಹಿಸಲಾದ ಪ್ರಸ್ತಾವನೆಯನ್ನು ಕವಿತಾ ಸಾರ್ವಜನಿಕಗೊಳಿಸಿದರು. ಈ ಪ್ರಸ್ತಾಪವನ್ನು ಸೆಪ್ಟೆಂಬರ್ 19ರಂದು ವಿಶ್ವ ಬ್ಯಾಂಕ್‌ಗೆ ಕಳುಹಿಸಲಾಗಿದೆ.

"ಈಗ ಡಿಪಿಆರ್ ಆಗಿಲ್ಲ ಎಂದು ಸರ್ಕಾರ ಜನರಿಗೆ ಮತ್ತು ಶಾಸಕಾಂಗಕ್ಕೆ ಸುಳ್ಳು ಮಾಹಿತಿ ನೀಡುತ್ತಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ತೆಲಂಗಾಣ ಮತ್ತು ಹೈದರಾಬಾದ್ ಅನ್ನು ವಿಶ್ವ ಬ್ಯಾಂಕ್​ಗೆ ಅಡವಿಟ್ಟಿದ್ದಾರೆ" ಎಂದು ಅವರು ಆರೋಪಿಸಿದರು. ಸರ್ಕಾರವು ಯೋಜನೆಯ ಬಗ್ಗೆ ಸತ್ಯ ಮರೆಮಾಚುತ್ತಿದೆ ಎಂದು ಹೇಳಿದರು.

ಮೂಸಿ ಯೋಜನೆಯ ಕುರಿತಾಗಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿಯೂ ಪೋಸ್ಟ್ ಮಾಡಿರುವ ಕವಿತಾ, "ಕಾಂಗ್ರೆಸ್ ಸರ್ಕಾರದ ಅನೇಕ ಸುಳ್ಳುಗಳು, ಸಾಲಗಳು ಮತ್ತು ಬೂಟಾಟಿಕೆಗಳಲ್ಲಿ ಇದೂ ಒಂದು. ಇದು ತೆಲಂಗಾಣದ ಬಗ್ಗೆ ಕಾಂಗ್ರೆಸ್‌ನ 'ದೃಷ್ಟಿಕೋನ'. ನಮ್ಮ ರಾಜ್ಯದ ಭವಿಷ್ಯವನ್ನು ಅಡವಿಡುವುದನ್ನು ನಿಲ್ಲಿಸಿ!" ಎಂದು ಬರೆದಿದ್ದಾರೆ.

ಇದನ್ನೂ ಓದಿ: ವಿಧಾನಸಭೆಗೆ ರಿಕ್ಷಾ ಚಲಾಯಿಸಿಕೊಂಡು ಬಂದು ಅಚ್ಚರಿ ಮೂಡಿಸಿದ ಕೆಟಿಆರ್.. ಯಾಕೆ ಗೊತ್ತಾ? - KTR DRIVES AUTORICKSHAW

ABOUT THE AUTHOR

...view details