ಉತ್ತರ ಪ್ರದೇಶ: ರಾಜ್ಯದ ಬಲ್ಲಿಯಾ ಜಿಲ್ಲೆಯಲ್ಲಿ ಸರ್ಕಾರ ಸಾಮೂಹಿಕ ವಿವಾಹ ಕಾಯಕ್ರಮದಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ. 'ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ'ಯಡಿಯಲ್ಲಿ ಜನವರಿ 25ರಂದು ವಿವಾಹ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಆದರೆ ಮದುವೆಯಲ್ಲಿ ವರನಿಲ್ಲದೆ ವಧುಗಳೇ ವರಮಾಲೆ ಹಾಕಿಕೊಂಡು ಮದುವೆ ಮಂಟಪದಲ್ಲಿ ಕುಳಿತಿದ್ದರು.
ಹೆಚ್ಚಾಗಿ ನಕಲಿ ವಧು, ವರರು ಅಲ್ಲಿದ್ದರು. ಅಚ್ಚರಿಯ ಸಂಗತಿಯೆಂದರೆ ಸರ್ಕಾರದ ಸವಲತ್ತಿಗಾಗಿ ಇಲ್ಲಿ ವಿವಾಹಿತರು, ಅಪ್ರಾಪ್ತರು, ಸಹೋದರ-ಸಹೋದರಿಯರೆಲ್ಲ ಮಧುಮಕ್ಕಳಂತೆ ಮಂಟಪದಲ್ಲಿ ಆಸೀನರಾಗಿದ್ದರು. ಈ ಸಾಮೂಹಿಕ ಮದುವೆಯ ವಿಡಿಯೋ ಹೊರಬಿದ್ದಿದ್ದು ಅಸಲಿಯತ್ತು ಬಯಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಅವರು ಅಧಿಕಾರಿಗಳ ವಿಶೇಷ ತಂಡ ರಚಿಸಿ ತನಿಖೆಗೆ ಆದೇಶಿಸಿದ್ದಾರೆ. ಇದುವರೆಗೆ 8 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಮೂಹಿಕ ವಿವಾಹ ಯೋಜನೆಯಡಿ ಸರ್ಕಾರ ಬಡ ಯುವತಿಯರ ಮದುವೆಗೆ 51 ಸಾವಿರ ರೂ ನೀಡುವುದಾಗಿ ಘೋಷಿಸಿತ್ತು. ಹೀಗಾಗಿ ಜನವರಿ 25ರಂದು ಬಲ್ಲಿಯಾದಲ್ಲಿ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ 568 ಜೋಡಿಗಳು ವಿವಾಹವಾಗಬೇಕಿತ್ತು.
ಮಾಧ್ಯಮದವರು ಈ ಬಗ್ಗೆ ಪ್ರಶ್ನಿಸಿದಾಗ, ಹಣದ ಆಮಿಷವೊಡ್ಡಿ ವರನನ್ನಾಗಿ ಮಾಡಿರುವುದು ತಿಳಿದು ಬಂದಿದೆ. ಬಿಜೆಪಿ ಶಾಸಕಿ ಕೇತ್ಕಿ ಸಿಂಗ್ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಕರಣದಲ್ಲಿ ಯಾರನ್ನೂ ಬಿಡುವುದಿಲ್ಲ. ತನಿಖೆ ನಡೆಸಲು ತಂಡಗಳನ್ನು ರಚಿಸಲಾಗಿದೆ. ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿ ಪಡೆದ ಹಣವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಇದುವರೆಗೆ 20 ಅರ್ಜಿಗಳ ತನಿಖೆಯಲ್ಲಿ ಎಂಟು ಅರ್ಜಿಗಳು ನಕಲಿ ಎಂದು ಪತ್ತೆಯಾಗಿದೆ. ಇವರೆಲ್ಲರ ವಿರುದ್ಧ ಪ್ರಕರಣ ದಾಖಲಾಗಿದ್ದು ಎಲ್ಲಾ ಅರ್ಜಿಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ರವೀಂದ್ರ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಬಂಧಿಸಿದ ಇಡಿ: ಚಂಪೈ ಸೊರೆನ್ ಹೊಸ ಮುಖ್ಯಮಂತ್ರಿ?