ಸೀತಾರಾಮರಾಜು (ಆಂಧ್ರಪ್ರದೇಶ) :ಬಹುತೇಕ ಮಕ್ಕಳಿಗೆ ಚಾಕೊಲೆಟ್, ಬಿಸ್ಕೆಟ್ ತುಂಬಾ ಇಷ್ಟ. ಮನೆಯಲ್ಲಿ ಮಾಡಿದ ಆಹಾರಕ್ಕಿಂತ ಅವರಿಗೆ ಹೆಚ್ಚು ಇಷ್ಟವಾಗೋದು ಬಿಸ್ಕೆಟ್ನಂತ ಪದಾರ್ಥಗಳು. ಹೀಗೆ ಆಟವಾಡುತ್ತ ಬಿಸ್ಕೆಟ್ ತಿನ್ನುತ್ತಿದ್ದ ಬಾಲಕನೋರ್ವ ದುರಂತ ಅಂತ್ಯ ಕಂಡಿದ್ದಾನೆ.ಗಂಟಲಿಗೆ ಬಿಸ್ಕೆಟ್ ಸಿಲುಕಿ ಮೂರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಇಲ್ಲಿನ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಡುಂಬ್ರಿಗುಡ ಮಂಡಲದಲ್ಲಿ ನಡೆದಿದೆ.
ಮೃತ ಬಾಲಕನನ್ನು ದುಂಬ್ರಿಗುಡ ಮಂಡಲ ವ್ಯಾಪ್ತಿಯ ಬೊಂಡುಗುಡ ಗ್ರಾಮದ ಕಿಂದಂಗಿ ತೇಜ (3) ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕ ಶನಿವಾರ ಸಂಜೆ ಆಟವಾಡುತ್ತಿದ್ದ ವೇಳೆ ಬಿಸ್ಕೆಟ್ ತಿಂದಿದ್ದಾನೆ. ಆಟವಾಡುತ್ತ ವೇಗವಾಗಿ ಬಿಸ್ಕೆಟ್ ತಿನ್ನುತ್ತಿದ್ದರಿಂದ ಅದು ಏಕಾಏಕಿ ಗಂಟಲಿಗೆ ಸಿಲುಕಿದೆ. ಹೀಗಾಗಿ ಬಾಲಕ ತಕ್ಷಣ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ. ಆಗ ಅವನಿಗೆ ಉಸಿರಾಡಲು ಸಾಧ್ಯವಾಗಿಲ್ಲ. ಕುಟುಂಬಸ್ಥರು ಬಾಲಕನನ್ನು ರಕ್ಷಿಸಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ.
ಬಳಿಕ ಪೋಷಕರು ಬಾಲಕನನ್ನು ಆಟೋದಲ್ಲಿ ಅರಕು ಕಣಿವೆ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದಿದ್ದು, ಅದಾಗಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.