ಸಾಂಬಾ(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಬಳಿ ಹೋಮ್ಸ್ಟೇ ತೆರೆದುಕೊಂಡಿದ್ದು, ಜಿಲ್ಲೆಯ ಮಾಜಿ ಸರಪಂಚ್ ಮೋಹನ್ ಸಿಂಗ್ ಭಟ್ಟಿ ತಮ್ಮ ಹೊಸ ಹೋಮ್ಸ್ಟೇಗೆ ಪ್ರವಾಸಿಗರನ್ನು ಬರಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಮೂರು ವರ್ಷಗಳ ಹಿಂದೆ ಇದೇ ತಿಂಗಳು ಭಾರತ ಹಾಗೂ ಪಾಕಿಸ್ತಾನದ ನಡುವೆ ನವೀಕೃತ ಕದನ ವಿರಾಮ ಜಾರಿಗೆ ಬಂದ ನಂತರ ಕಂಡುಬಂದಿರುವ ಬದಲಾವಣೆ ಇದಾಗಿದೆ.
ಗಡಿಯಲ್ಲಿ ಶಾಂತಿ ನೆಲೆಸಿರುವ ಹಿನ್ನೆಲೆಯಲ್ಲಿ ಗಡಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಜಮ್ಮು ಹಾಗೂ ಕಾಶ್ಮೀರ ಆಡಳಿತ, ರಾಮಗಢ ವಲಯದ ಪ್ರಸಿದ್ಧ ಬಾಬಾ ಚಾಮ್ಲಿಯಾಲ್ ದೇಗುಲದ ಸಮೀಪದಲ್ಲಿ ಹೋಮ್ ಸ್ಟೇಗಳ ನಿರ್ಮಾಣಕ್ಕೆ ಇತ್ತೀಚೆಗೆ ಒಪ್ಪಿಗೆ ನೀಡಿತ್ತು.
ಹಿಂದೆ ಇಂಡೋ-ಪಾಕಿಸ್ತಾನ ಸ್ನೇಹದ ಸಂಕೇತ ಎಂದು ಪರಿಗಣಿಸಲಾಗಿದ್ದ, ಶೂನ್ಯ ರೇಖೆಯಲ್ಲಿರುವ ಪ್ರಸಿದ್ಧ ದೇವಾಲಯ ಬಾಬಾ ಚಾಮ್ಲಿಯಾಲ್ಗೆ ದೇಶಾದ್ಯಂತದಿಂದ, ವಿಶೇಷವಾಗಿ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಈ ದೇವಾಲಯಕ್ಕೆ ಪಾಕಿಸ್ತಾನದ ಪ್ರತಿನಿಧಿಗಳು ಪೂಜೆ ಸಲ್ಲಿಸಲು ಬರುತ್ತಿದ್ದರು. ಆದರೆ 2018ರ ಜೂನ್ 13 ರಂದು ಗಡಿಯಾಚೆಗಿನ ದಾಳಿಯಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಸೇರಿದಂತೆ ನಾಲ್ಕು ಬಿಎಸ್ಎಫ್ ಸಿಬ್ಬಂದಿ ಸಾವನ್ನಪ್ಪಿದ ನಂತರ ಪೂಜೆಗೆ ಬರುವುದು ನಿಂತಿತು. ಕಳೆದ ವರ್ಷ ನವೆಂಬರ್ 8ರ ಮಧ್ಯರಾತ್ರಿ ರಾಮಗಢ ಸೆಕ್ಟರ್ನಲ್ಲಿ ಪಾಕಿಸ್ತಾನ ರೇಂಜರ್ಗಳ ಗುಂಡಿನ ದಾಳಿಯಲ್ಲಿ ಬಿಎಸ್ಎಫ್ ಜವಾನ ಸಾವನ್ನಪ್ಪಿದ್ದರು. 2021ರ ಫೆಬ್ರವರಿ 25ರಂದು ಉಭಯ ದೇಶಗಳು ನವೀಕೃತ ಕದನ ವಿರಾಮದ ಒಪ್ಪಂದವನ್ನು ಮಾಡಿಕೊಂಡ ನಂತರ, ಸಂಭವಿಸಿದ ಮೊದಲ ಸಾವಾಗಿತ್ತು.
ಇದೀಗ ಮೋಹನ್ ಸಿಂಗ್ ಭಟ್ಟಿ ಅವರು ಗಡಿಭಾಗದ ಫತ್ವಾಲ್ನ ದಗ್ ಚನ್ನಿ ಗ್ರಾಮದಲ್ಲಿ ಎರಡು ಅಂತಸ್ತಿನ ಹೋಮ್ ಸ್ಟೇ ಪ್ರಾರಂಭಿಸಿದ್ದಾರೆ. ಇದರ ಜೊತೆಗೆ ಪ್ರವಾಸಿಗರಿಗೆ ಗಡಿಯಲ್ಲಿರುವ ಭಾವನೆ ಮೂಡಿಸಲು ಹಾಗೂ ಗಡಿಯಾಚೆಗಿನ ಶೆಲ್ ದಾಳಿಯ ಸಂದರ್ಭದಲ್ಲಿ ಯಾವುದೇ ಹಾನಿಯಾಗದಂತೆ ಸುರಕ್ಷತಾ ಕ್ರಮ, ಈ ಎರಡು ಉದ್ದೇಶಗಳೊಂದಿಗೆ ಸುಸಜ್ಜಿತ ಭೂಗತ ಬಂಕರ್ ಅನ್ನು ಸಹ ನಿರ್ಮಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಭಟ್ಟಿ, "ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದಂತೆ ನಾವು ನಮ್ಮ ನೆರೆಹೊರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಅನಗತ್ಯ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು ನಾವು ಸಿದ್ಧರಾಗಿರಬೇಕು" ಎಂದು ಹೇಳಿದರು.