ನವದೆಹಲಿ: ಕಳೆದ ಒಂದು ಅಥವಾ ಒಂದೂವರೆ ವರ್ಷದಲ್ಲಿ ನಮ್ಮ ಸರ್ಕಾರ ಸುಮಾರು 10 ಲಕ್ಷ ಯುವಕರಿಗೆ ಖಾಯಂ ಸರಕಾರಿ ಉದ್ಯೋಗಗಳನ್ನು ಒದಗಿಸಿದ್ದು, ಇದೊಂದು ದಾಖಲೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ವರ್ಚುವಲ್ ಕಾರ್ಯಕ್ರಮದ ಮೂಲಕ ರೋಜಗಾರ್ ಮೇಳದಲ್ಲಿ ನೇಮಕಗೊಂಡವರನ್ನುದ್ದೇಶಿಸಿ ಮಾತನಾಡಿದ ಅವರು, ಮೇಳದಲ್ಲಿ 71,000 ಕ್ಕೂ ಹೆಚ್ಚು ಜನರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಈ ಹಿಂದಿನ ಯಾವುದೇ ಸರ್ಕಾರಗಳ ಅವಧಿಯಲ್ಲಿಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ನೌಕರಿಗಳನ್ನು ನೀಡಿರುವ ಉದಾಹರಣೆ ಇಲ್ಲ ಎಂದು ಹೇಳಿದರು.
ಯುವ ಜನತೆ ಕೇಂದ್ರೀಕರಿಸಿ ನಮ್ಮ ಸರ್ಕಾರದ ನೀತಿ: ಯುವಜನತೆಯನ್ನು ಕೇಂದ್ರೀಕರಿಸಿ ತಮ್ಮ ಸರ್ಕಾರ ನೀತಿಗಳನ್ನು ರೂಪಿಸುತ್ತಿದೆ ಎಂದು ತಿಳಿಸಿದ ಪ್ರಧಾನಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗಿದೆ ಎಂದರು. ಅಧಿಕ ಸಂಖ್ಯೆಯ ಮಹಿಳೆಯರು ಉದ್ಯೋಗಗಳಿಗೆ ನೇಮಕಗೊಂಡಿರುವುದನ್ನು ಪ್ರಸ್ತಾಪಿಸಿದ ಮೋದಿ, ಮಹಿಳೆಯರನ್ನು ಪ್ರತಿಯೊಂದು ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದರು.
"ಮಹಿಳೆಯರಿಗೆ 26 ವಾರಗಳ ಹೆರಿಗೆ ರಜೆ ನೀಡುವ ಸರ್ಕಾರದ ನಿರ್ಧಾರವು ಅವರ ವೃತ್ತಿಜೀವನದಲ್ಲಿ ಸಾಕಷ್ಟು ಸಹಾಯ ಮಾಡಿದೆ. 'ಪಿಎಂ ಆವಾಸ್ ಯೋಜನೆ' ಅಡಿಯಲ್ಲಿ ನಿರ್ಮಿಸಲಾದ ಮನೆಯ ಬಹುಪಾಲು ಮಾಲೀಕರು ಮಹಿಳೆಯರೇ ಆಗಿದ್ದಾರೆ. ದೇಶದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿ ನಡೆಯುತ್ತಿದೆ" ಎಂದು ಅವರು ಹೇಳಿದರು.
ಯುವಕ ಸಾಮರ್ಥ್ಯದ ಗರಿಷ್ಠ ಬಳಕೆ ನಮ್ಮ ಆದ್ಯತೆ: ಭಾರತೀಯ ಯುವಕರ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಗರಿಷ್ಠವಾಗಿ ಬಳಸಿಕೊಳ್ಳುವುದು ತಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದ ಮೋದಿ, ಯುವಕರು ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ ಅಥವಾ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿನ ಸುಧಾರಣೆಗಳು ಸೇರಿದಂತೆ ಹಲವಾರು ಯೋಜನೆಗಳ ಕೇಂದ್ರಬಿಂದುವಾಗಿದ್ದಾರೆ ಎಂದು ಹೇಳಿದರು.
"ರಾಷ್ಟ್ರೀಯ ಶಿಕ್ಷಣ ನೀತಿಯಡಿ ಯುವಜನರ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾತೃಭಾಷೆಗಳ ಬಳಕೆಗೆ ಒತ್ತು ನೀಡಲಾಗಿದೆ. ಯುವಕರು ಈಗ 13 ಭಾರತೀಯ ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆಗಳನ್ನು ಬರೆಯಬಹುದಾಗಿದೆ" ಎಂದು ಅವರು ತಿಳಿಸಿದರು.
ಇಂದು ಆರ್ಡರ್ ಪಡೆದವರಲ್ಲಿ ಇದ್ದಾರೆ ಶೇ 29 ರಷ್ಟು ಒಬಿಸಿಗಳು: ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ನೇಮಕಗೊಂಡ 71,000 ಜನರಲ್ಲಿ ಶೇಕಡಾ 29 ಕ್ಕೂ ಹೆಚ್ಚು ಒಬಿಸಿ ವರ್ಗಕ್ಕೆ ಸೇರಿದವರು ಎಂದು ಹೇಳಿದರು. ಯುಪಿಎ ಸರಕಾರಕ್ಕೆ ಹೋಲಿಸಿದರೆ ಮೋದಿ ಸರಕಾರದಲ್ಲಿ ಹಿಂದುಳಿದ ವರ್ಗದವರ ನೇಮಕಾತಿಯಲ್ಲಿ ಶೇ 27ರಷ್ಟು ಹೆಚ್ಚಳವಾಗಿದೆ ಎಂದು ಅವರು ಮಾಹಿತಿ ನೀಡಿದರು.