INDIAS TOP SONGS 2024: 2024ರ ವರ್ಷದಲ್ಲಿ ಭಾರತದ ಹಲವಾರು ಹಾಡುಗಳು ಜನರ ಮನಸಿನಲ್ಲಿ ಅಚ್ಚೊತ್ತುವುದರ ಜೊತೆಗೆ ಭಾರೀ ಜನಪ್ರಿಯತೆ ಗಳಿಸಿದವು ಈ ಹಾಡುಗಳಿಗೆ ಯೂಟ್ಯೂಬ್‌ನಲ್ಲಿ ಭರ್ಜರಿ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿವೆ. ಯಾವುದೇ ಒಂದು ಚಿತ್ರದ ಹಿಟ್ ಆಗಬೇಕಾದರೆ ಅದರಲ್ಲಿರುವ ಹಾಡುಗಳು ಹಾಗೂ ಸಂಗೀತ ಬಹುಮುಖ್ಯ ಪಾತ್ರ ವಹಿಸುತ್ತವೆ.
ಸಂಗೀತ, ಹಾಡುಗಳ ಮೂಲಕ ಹಾಗೂ ಚಿತ್ರಕಥೆಗಳ ಗೆದ್ದಿರುವ ಸಿನಿಮಾಗಳಿವೆ. ಆದರೆ, ಕೆಲವು ಸಿನಿಮಾಗಳು ಸೋತರೂ ಕೂಡ ಹಾಡುಗಳಿಂದಲೇ ಗೆದ್ದಿರುವ ಉದಾಹರಣೆಗಳು ಅನೇಕ ಇವೆ. 2024ರಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹಾಗೂ ಉತ್ತರದಿಂದ ದಕ್ಷಿಣಕ್ಕೆ ಅತ್ಯಂತ ಜನಪ್ರಿಯ ಭಾರತೀಯ ಹಾಡುಗಳ ಬಗ್ಗೆ ತಿಳಿದುಕೊಳ್ಳೋಣ. ಈ ಹಾಡುಗಳು ನಿಮಗೆ ಸಂತೋಷ ನೀಡುವುದಲ್ಲದೆ ನಿಮ್ಮನ್ನೂ ನೃತ್ಯ ಮಾಡಲು ಪ್ರೇರೇಪಿಸುತ್ತವೆ. ಯೂಟ್ಯೂಬ್‌ನಲ್ಲಿ 2024ರಲ್ಲಿ ಜನಮೆಚ್ಚುಗೆ ಗಳಿಸಿದ ದೇಶದ ವಿವಿಧ ಭಾಷೆಗಳ ಕೆಲವು ಹಾಡುಗಳ ಪಟ್ಟಿ ಇಲ್ಲಿದೆ ನೋಡಿ..
ಹಿತ್ತಲಕ ಕರಿಬ್ಯಾಡ ಮಾವ: ಕನ್ನಡ ಭಾಷೆಯ ‘ಕರಟಕ ದಮನಕ’ ಚಿತ್ರದ 'ಹಿತ್ತಲಕ ಕರಿಬ್ಯಾಡ ಮಾವ' ಹಾಡು ಈ ವರ್ಷ ತುಂಬಾ ಜನಪ್ರಿಯವಾಗಿತ್ತು. ಗಾಯಕಿ ಶ್ರುತಿ ಪ್ರಹ್ಲಾದ ಮತ್ತು ಉತ್ತರ ಕರ್ನಾಟಕದ ಗಾಯಕ ಮಾಳು ನಿಪನಾಳ್ ಹಾಡಿದ್ದಾರೆ. ಜನಪ್ರಿಯ ನಟ ಮತ್ತು ನೃತ್ಯ ಸಂಯೋಜಕ ಪ್ರಭುದೇವ ಮತ್ತು ನಟಿ ನಿಶ್ವಿಕಾ ನಾಯ್ಡು ಅವರು ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಈ ಹಾಡು ಯೂಟ್ಯೂಬ್‌ನಲ್ಲಿ ಇದುವರೆಗೆ 82 ಮಿಲಿಯನ್ ವ್ಯೂವ್ಸ್ ಆಗಿವೆ. ಯೋಗರಾಜ್ ಭಟ್ ಸಾಹಿತ್ಯ ಮತ್ತು ವಿ. ಹರಿಕೃಷ್ಣ ಸಂಗೀತ ಈ ಗೀತೆಗಿದೆ.
ಆಜ್ ಕಿ ರಾತ್: 2024ರಲ್ಲಿ ಬಿಡುಗಡೆಯಾದ 'ಸ್ತ್ರೀ 2' ಚಿತ್ರದ 'ಆಜ್ ಕಿ ರಾತ್' ಹಾಡನ್ನು ಭಾರೀ ಜನ ಮೆಚ್ಚುಗೆ ಗಳಿಸಿತ್ತು. ಈ ವರ್ಷ ಎಲ್ಲಾ ಪಾರ್ಟಿಗಳು ಮತ್ತು ಸಮಾರಂಭಗಳಲ್ಲಿ ಈ ಹಾಡು ಭಾರೀ ಸದ್ದು ಮಾಡಿದೆ. ನಟಿ ತಮನ್ನಾ ಭಾಟಿಯಾ, ರಾಜ್‌ಕುಮಾರ್ ರಾವ್ ಹಾಡಿನಲ್ಲಿ ಸಖತ್ ನೃತ್ಯ ಮಾಡಿದ್ದಾರೆ. ಮಧುಬಂತಿ ಬಾಗ್ಚಿ ಮತ್ತು ದಿವ್ಯಾ ಕುಮಾರ್ ಧ್ವನಿ ನೀಡಿದ್ದಾರೆ. ಹಾಡಿಗೆ ಅಮಿತಾಭ್ ಭಟ್ಟಾಚಾರ್ಯ ಸಾಹಿತ್ಯ, ಸಚಿನ್-ಜಿಗರ್ ಸಂಗೀತ ಸಂಯೋಜಿಸಿದ್ದಾರೆ. ವಿಜಯ್ ಗಂಗೂಲಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಹಾಡು ಯೂಟ್ಯೂಬ್‌ನಲ್ಲಿ 696 ಮಿಲಿಯನ್ ವ್ಯೂವ್ಸ್ ಗಳಿಸಿದೆ.
ಕುರುಚಿ ಮಡತಪೆಟ್ಟಿ: ಈ ವರ್ಷದಲ್ಲಿ ಗುಂಟೂರು ಕಾರಂ ಚಿತ್ರದ 'ಕುರುಚಿ ಮಡತಪೆಟ್ಟಿ' ತೆಲುಗು ಹಾಡು ಬಹಳ ಜನಪ್ರಿಯವಾಗಿತ್ತು. ಸೂಪರ್ ಸ್ಟಾರ್ ಮಹೇಶ್ ಬಾಬು, ಶ್ರೀಲೀಲಾ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಚಗಂಟಿ ಸಾಹಿತ್ಯ ಮತ್ತು ಶ್ರೀ ಕೃಷ್ಣ ಧ್ವನಿ ನೀಡಿರುವ ಈ ಹಾಡು ಯೂಟ್ಯೂಬ್‌ನಲ್ಲಿ 519 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ.
ಅಸಾ ಕುಡಾ: ಸಾಯಿ ಅಭ್ಯಂಕರ್ ಹಾಗೂ ಸಾಯಿ ಸ್ಮೃತಿ ಅವರ ತಮಿಳು ಭಾಷೆಯ ಹಾಡು 'ಅಸಾ ಕುಡಾ' ಈ ವರ್ಷ ಬಹಳ ಜನಪ್ರಿಯವಾಗಿತ್ತು. ಈ ಹಾಡು ಇನ್‌ಸ್ಟಾಗ್ರಾಮ್ ರೀಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಈ ಹಾಡನ್ನು ಯೂಟ್ಯೂಬ್‌ನಲ್ಲಿ 182 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ.
ಇಲ್ಯುಮಿನಾಟಿ ಸಾಂಗ್: ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಅನೇಕ ಸುಂದರವಾದ ಸಿನಿಮಾಗಳು ತೆರೆಕಂಡಿವೆ. ಈ ಚಿತ್ರಗಳು ಅನೇಕ ಗಮನಸೆಳೆಯುವಂತಹ ಹಾಡುಗಳನ್ನು ನೀಡಿದೆ. 2024ರಲ್ಲಿ ಆವೇಶಮ್ ಚಿತ್ರದ ಇಲ್ಯುಮಿನಾಟಿ ಹಾಡು ಮಲಯಾಳಂನಲ್ಲಿ ಅತ್ಯಂತ ಜನಪ್ರಿಯ ಹಾಡಾಗಿತ್ತು. ಈ ಹಾಡು ಯೂಟ್ಯೂಬ್‌ನಲ್ಲಿ 240 ಮಿಲಿಯನ್ ಜನರು ನೋಡಿದ್ದಾರೆ.
ಗುಲಾಬಿ ಸಾಡಿ: ಸಂಜು ರಾಥೋಡ್ ಅವರ ಮರಾಠಿ ಹಾಡು ಈ ವರ್ಷ ಬಹಳ ಜನಪ್ರಿಯವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಗೀತೆ ಬಹಳ ಜನಪ್ರಿಯವಾಗಿತ್ತು. ಮಹಾರಾಷ್ಟ್ರ ಮತ್ತು ದೇಶದ ಇತರ ಭಾಗಗಳಲ್ಲಿ ಈ ಹಾಡು ಇಂದಿಗೂ ಎಲ್ಲರ ಬಾಯಿಂದ ಕೇಳಿಬತ್ತಿದೆ. ಈ ಹಾಡು ಪ್ರಸ್ತುತ ಯೂಟ್ಯೂಬ್‌ನಲ್ಲಿ 331 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ಜುದ್ಧ ಸಾಂಗ್: 2024ರಲ್ಲಿ ಅಸ್ಸೋಂ ಭಾಷೆಯ ಜುದ್ಧ ಹಾಡು ಭಾರೀ ಜನಪ್ರಿಯ ಗಳಿಸಿದೆ. ಈ ಹಾಡಿಗೆ ಪ್ರಂದೀಪ್ ಹಾಗೂ ರಿದೀಪ್ತ ಶರ್ಮಾ ಧ್ವನಿ ನೀಡಿದ್ದಾರೆ. ಹಾಡಿನಲ್ಲಿ ತ್ರಿದೀಪ್ ಲಹಾನ್, ಚುಮ್ಕಿ ಕಚಾರಿ, ನಿರುಪಮ್ ಶೈಕಿಯಾ, ಶಿಲ್ಪಿಶಿಖಾ ಬೋರಾ ನಟಿಸಿದ್ದಾರೆ. ಈ ಹಾಡು ಈಗಾಗಲೇ ಯೂಟ್ಯೂಬ್‌ನಲ್ಲಿ 29 ಮಿಲಿಯನ್ ವ್ಯೂವ್ಸ್ ತಲುಪಿದೆ.
ಲಗೇ ಉರಾ ಧುರಾ: 2024 ವರ್ಷದಲ್ಲಿ ತುಫಾನ್ ಚಿತ್ರದ 'ಲಗೇ ಉರಾ ಧುರಾ' ಹಾಡು ಬಂಗಾಳಿ ಹಾಡು ಹೆಚ್ಚು ಜನಪ್ರಿಯವಾಗಿತ್ತು. ಪ್ರೀತಮ್ ಹಾಸನ್ ಮತ್ತು ದೇವಶ್ರೀ ಅಂತ್ರಾ ಹಾಡಿರುವ ಈ ಹಾಡು ಯೂಟ್ಯೂಬ್‌ನಲ್ಲಿ ಇದುವರೆಗೆ 223 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ಲಾಲ್ ತಾಹ್ ತಾಹ್: ಒಡಿಶಾ ರಾಜ್ಯದ ಒರಿಯಾ ಭಾಷೆಯಲ್ಲಿ 2024ರಲ್ಲಿ ಅತ್ಯಂತ ಜನಪ್ರಿಯ ಹಾಡುಗಳಲ್ಲಿ 'ಲಾಲ್ ತಾಹ್ ತಾಹ್' ಒಂದಾಗಿದೆ. ಈ ಸಾಂಗ್ ಭಾರಿ ಸದ್ದು ಮಾಡಿತ್ತು. ಮೊಂಟು ಸೂರಿಯಾ, ಅಸಿಮಾ ಪಾಂಡಾ ಮತ್ತು ಬಾಬುಚನ್ ಡ್ಯಾನ್ಸ್ ಮಾಡಿರುವ ಈ ಹಾಡು ಯೂಟ್ಯೂಬ್‌ನಲ್ಲಿ 18 ಮಿಲಿಯನ್ ವ್ಯೂವ್ಸ್ ಗಳಿಸಿದೆ.
ಖಲಾಸಿ: ಗುಜರಾತಿ ಭಾಷೆಯ ಖಲಾಸಿ ಹಾಡು ಕಳೆದ ವರ್ಷ ಬಿಡುಗಡೆಯಾಗಿದ್ದರೂ, 2024ರಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ರೀಲ್ಸ್, ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ಬಹಳ ಜನಪ್ರಿಯವಾಗಿತ್ತು. ಈ ಸಾಂಗ್ನ್ನು ಆದಿತ್ಯ ಗಾಧ್ವಿ ಮತ್ತು ಅಚಿಂತ್ ಹಾಡಿದ್ದಾರೆ. ಯೂಟ್ಯೂಬ್‌ನಲ್ಲಿ 151 ಮಿಲಿಯನ್ ವ್ಯೂವ್ಸ್ ಗಳಿಸಿದೆ.
ಇದನ್ನೂ ಓದಿ: ತರುಣ್ ಸೋನಾಲ್ To ಕೃತಿ ಕರಬಂದ, ನಾಗಚೈತನ್ಯ: 2024ರಲ್ಲಿ ಹಸೆಮಣೆಯೇರಿದ ಸೆಲೆಬ್ರಿಟಿ ಜೋಡಿಗಳು