ಕಲಬುರಗಿ: ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ತರ ಕಾಂಪೌಂಡ್ ಬಳಿ ದರೋಡೆ ವೇಳೆ ಕಾಲು ಮುರಿದಿದೆ ಎಂದು ದಾಖಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ದರೋಡೆಕೋರರಲ್ಲ.. ಕೈಹಿಡಿದ ಧರ್ಮಪತ್ನಿಯೇ ತನ್ನ ಗಂಡನ ಕಾಲು ಮುರಿಯಲು ಸುಪಾರಿ ನೀಡಿ ಕಾಲು ಮುರಿಸಿದ್ದಾಳೆ ಅನ್ನುವ ವಿಚಾರ ಪೊಲೀಸರು ಬಯಲಿಗೆಳೆದಿದ್ದಾಳೆ.
ಪತ್ನಿ ನೀಡಿದ ಸುಪಾರಿಯಿಂದ ಎರಡು ಕಾಲು ಮುರಿದುಕೊಂಡು ಪತಿ ವೆಂಕಟೇಶ್ ಬೆಡ್ ರೆಸ್ಟ್ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಪಾರಿ ಕೊಟ್ಟ ಮಹಿಳೆ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಪತ್ನಿ ಉಮಾದೇವಿ ಹಾಗೂ ಸುಪಾರಿ ಪಡೆದು ಕಾಲು ಮುರಿದ ಆರಿಫ್, ಮನೋಹರ, ಸುನೀಲ್ ಬಂಧಿತರು ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಅವರು ತಿಳಿಸಿದ್ದಾರೆ.
ಕೆಲ ದಿನಗಳಿಂದ ವೆಂಕಟೇಶ್ ಪರ ಸ್ತ್ರಿಯೊಂದಿಗೆ ಸಲುಗೆಯಿಂದ ಇರುತ್ತಿದ್ದನಂತೆ, ಇದನ್ನು ಗಮನಿಸಿದ ಪತ್ನಿ ಉಮಾದೇವಿ ಕೋಪಗೊಂಡು ಮಹಿಳೆ ಜೊತೆಗಿನ ಸ್ನೇಹ ಬಿಡುವಂತೆ ಒತ್ತಾಯಿಸಿದ್ದಾಳೆ. ಆದರೂ ವೆಂಕಟೇಶ್ ತನ್ನ ಸಲುಗೆ ಮುಂದುವರಿಸಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ಹಲವುಬಾರಿ ಗಲಾಟೆ ಕೂಡಾ ಆಗಿದೆ. ಆದರೂ ವೆಂಕಟೇಶ್ ಮಹಿಳೆಯೊಂದಿಗೆ ಸಲುಗೆ ಮುಂದುವರೆಸಿದಾಗ ಕೆರಳಿದ ಪತ್ನಿ ಉಮಾದೇವಿ, ಕಾಲು ಮುರಿದರೆ ಮನೆಯಲ್ಲಿ ಇರುತ್ತಾನೆಂದು ಗಂಡನ ಎರಡೂ ಕಾಲುಗಳನ್ನು ಮುರಿಯುವಂತೆ ಯುವಕರಿಗೆ 5 ಲಕ್ಷ ರೂ. ಸುಪಾರಿ ನೀಡಿದ್ದಳು.
ಉಮಾದೇವಿ ನೀಡಿದ ಸುಪಾರಿ ಮೇರೆಗೆ ಆರೀಫ್, ಮನೋಹರ, ಸುನೀಲ್ ಎನ್ನುವರು ವೆಂಕಟೇಶನ ಎರಡೂ ಕಾಲು ಮುರಿದಿದ್ದಾರೆ. ಬಳಿಕ ವೆಂಕಟೇಶ್ ಮಗ ಇದು ದರೋಡೆ ಪ್ರಕರಣದ ವೇಳೆ ಕಾಲು ಮುರಿತ ಎಂದು ದೂರು ನೀಡಿದ್ದ. ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಉಮಾದೇವಿಯ ಅಸಲಿಯತ್ತು ಬಯಲಾಗಿದೆ. ಸದ್ಯ ಆರೋಪಿಗಳನ್ನು ಹೆಡೆಮುರಿ ಕಟ್ಟಿ ಬ್ರಹ್ಮಪುರ ಠಾಣೆ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.
ಇದನ್ನೂ ಓದಿ: ಉದ್ಯಮಿಯಿಂದ ಹಣ ಸುಲಿಗೆ; ಇಬ್ಬರು ಪೊಲೀಸರು ಸೇರಿ ಮೂವರ ಬಂಧನ