ಬೆಂಗಳೂರು: ಮಹಿಳೆಯರನ್ನು ಪ್ರಮುಖ ಫಲಾನುಭವಿಗಳನ್ನಾಗಿ ಕೇಂದ್ರೀಕರಿಸುವ ಪಂಚ ಗ್ಯಾರಂಟಿಗಳ ಮೂಲಕ ಲಿಂಗ ಸಮಾನತೆಯನ್ನು ತರುವಲ್ಲಿ ಕರ್ನಾಟಕದ ಉಪಕ್ರಮಗಳ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಕ್ಯಾಮರೂನ್‌ನ ಫಿಲೆಮನ್ ಯಾಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಕ್ಯಾಮರೂನ್‌ನ ಶ್ರೀ ಫಿಲೆಮನ್ ಯಾಂಗ್ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಈ ವೇಳೆ, ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಕೈಯಲ್ಲಿ ನಗದು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಕಾರ್ಮಿಕ ವರ್ಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ಸುಧಾರಿಸಲು, ಹಸಿವು ಮತ್ತು ಅಪೌಷ್ಟಿಕತೆ ತಡೆಗಟ್ಟಲು ತಲಾವಾರು ಪೋಷಕಾಂಶ ನೀಡುತ್ತಿರುವುದು ಹಾಗೂ ದೈನಂದಿನ ಅಡುಗೆಯ ಶ್ರಮವನ್ನು ಕಡಿಮೆ ಮಾಡಲು ಮನೆಯಲ್ಲಿ ಗ್ಯಾಜೆಟ್‌ಗಳನ್ನು ಬಳಸಲು ಉಚಿತ ವಿದ್ಯುತ್ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಸಿಎಂ ಕಚೇರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರನ್ನು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್ ಅವರು ಸ್ವಸಹಾಯ ಗುಂಪಿನ ಮಹಿಳೆಯರು ರೇಷ್ಮೆ ಗೂಡುಗಳಿಂದ ತಯಾರಿಸಿದ ಪುಷ್ಪಗುಚ್ಛವನ್ನು ನೀಡಿ ಸ್ವಾಗತಿಸಿದರು. ಅಲ್ಲದೆ, ವಿಶ್ವಸಂಸ್ಥೆಯ ವೈವಿಧ್ಯತೆಯಲ್ಲಿ ಏಕತೆ ಎಂಬ ತತ್ವದಂತೆ ಒಂದು ರಾಜ್ಯ, ಅನೇಕ ಜಗತ್ತುಗಳನ್ನು ಪ್ರತಿನಿಧಿಸುವ ಕರ್ನಾಟಕದ ಕುರಿತಾದ ಪುಸ್ತಕವನ್ನು ನೀಡಿದರು.
ಪ್ರಮುಖ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ (SDG) ಕರ್ನಾಟಕವು ಹೇಗೆ ಉನ್ನತ ಸ್ಥಾನ ಪಡೆಯಲು ಸಾಧ್ಯವಾಯಿತು ಎಂಬುದರ ಕುರಿತು ವಿಶ್ವಸಂಸ್ಥೆಯ ಅಧ್ಯಕ್ಷರು ವಿವರಗಳನ್ನು ಕೋರಿದರು. ರಾಜ್ಯದಲ್ಲಿ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಉತ್ತೇಜಿಸಲು ಮಹಿಳಾ ಪರ ಕಾರ್ಯಕ್ರಮಗಳನ್ನು ಮುನ್ನಡೆಸಿದ್ದಕ್ಕಾಗಿ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಯವರನ್ನು ವಿಶ್ವಸಂಸ್ಥೆಯ ಅಧ್ಯಕ್ಷರು ಅಭಿನಂದಿಸಿದರು. ಭವಿಷ್ಯದ ವಿಶ್ವಸಂಸ್ಥೆಯ ಕಾರ್ಯಾಗಾರಗಳಲ್ಲಿ ಕರ್ನಾಟಕದ ಯಶಸ್ಸಿನ ಬಗ್ಗೆ ಹಂಚಿಕೊಳ್ಳಲಾಗುವುದು. ಇದರಿಂದ ಇತರ ದೇಶಗಳು ಸಹ ಈ ಅತ್ಯುತ್ತಮ ಯೋಜನೆಗಳನ್ನು ಅಳವಡಿಸಿಕೊಳ್ಳಬಹುದು ಎಂದು ಯಾಂಗ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಕೋವಿಡ್ ಲಸಿಕೆ ಬಳಿಕ ಹೃದಯಾಘಾತ ಹೆಚ್ಚಳ?: ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಲು ಸಿಎಂ ಸೂಚನೆ
ಒಟ್ಟು ಇಂಧನ ಉತ್ಪಾದನೆಯಲ್ಲಿ ಶೇ.40ರಷ್ಟು ಪಾಲು ನವೀಕರಿಸಬಹುದಾದ ಮೂಲಗಳಿಂದ ಬರುತ್ತಿರುವುದರಿಂದ ಕರ್ನಾಟಕ ಶುದ್ಧ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ದೇಶದಲ್ಲಿಯೇ ಅಗ್ರಸ್ಥಾನ ಪಡೆದಿರುವುದಕ್ಕೆ ವಿಶ್ವಸಂಸ್ಥೆಯ ಅಧ್ಯಕ್ಷರು ಸಂತೋಷ ವ್ಯಕ್ತಪಡಿಸಿದರು. ಮಾಹಿತಿ ತಂತ್ರಜ್ಞಾನ, ತಂತ್ರಾಂಶ ಅಭಿವೃದ್ಧಿ, ಕೃತಕ ಬುದ್ಧಿ ಮತ್ತೆ (AI), ಸಂಶೋಧನೆ ಮತ್ತು ನಾವೀನ್ಯತೆಗಾಗಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆ ವಿಷಯದಲ್ಲಿ ಕರ್ನಾಟಕವು ಸಾಧಿಸಿರುವ ಪ್ರಗತಿಯನ್ನು ವಿಶ್ವಸಂಸ್ಥೆಯ ಅಧ್ಯಕ್ಷರು ಪ್ರಶಂಸಿಸಿದರು. ಇತರ ದೇಶಗಳಿಗೆ ಡಿಜಿಟಲ್ ರೂಪಾಂತರವನ್ನು ಉತ್ತೇಜಿಸುವ ಸಲುವಾಗಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಸಹಾಯದ ಅಗತ್ಯವಿದ್ದು, ಇದಕ್ಕಾಗಿ ಅವರು ರಾಜ್ಯದ ಬೆಂಬಲವನ್ನು ಕೋರಿದರು. ರಾಜ್ಯ, ಜಿಲ್ಲೆ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸುಸ್ಥಿರತೆ ಸೂಚಕಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಕರ್ನಾಟಕ ರಚಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಡ್ಯಾಶ್ಬೋರ್ಡ್ ಅನ್ನು ಅವರು ಶ್ಲಾಘಿಸಿದರು.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ: ರಾಜ್ಯಪಾಲರ ಪ್ರಶ್ನೆಗಳಿಗೆ ಸ್ಪಷ್ಟೀಕರಣ ನೀಡಿದ ಸಚಿವ ಹೆಚ್.ಕೆ.ಪಾಟೀಲ್