ಬಹುನಿರೀಕ್ಷಿತ 'ಪುಷ್ಪ-2' ಬಿಡುಗಡೆಯ ಹಿಂದಿನ ರಾತ್ರಿ ನಡೆದ ಕಾಲ್ತುಳಿತದಲ್ಲಿ ಮಹಿಳಾ ಅಭಿಮಾನಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಹೈದರಾಬಾದ್ನ ಪ್ರಸಿದ್ಧ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಭವಿಸಿ ರೇವತಿ ಎಂಬ ಅಭಿಮಾನಿ ಸಾವನ್ನಪ್ಪಿದ ಘಟನೆಯ ವಿವರಣೆಯನ್ನು ನಗರ ಪೊಲೀಸ್ ಆಯುಕ್ತ ಸಿ ವಿ ಆನಂದ್ ಒದಗಿಸಿದ್ದಾರೆ.
ನಗರದ ಆ್ಯನುವಲ್ ಕ್ರೈಮ್ ರಿವ್ಯೂವ್ ಮೀಟಿಂಗ್ನಲ್ಲಿ ಮಾತನಾಡಿದ ಅವರು, ಸಿಸಿಟಿವಿ ಫುಟೇಜ್, ಸೋಷಿಯಲ್ ಮೀಡಿಯಾ ಕ್ಲಿಪ್ಸ್ ಹಾಗೂ ಮೀಡಿಯಾ ಕವರೇಜ್ ಸೇರಿದಂತೆ ಸಾಕ್ಷಿಗಳನ್ನು ಸಂಗ್ರಹಿಸಲು ಪೊಲೀಸರು 10,000ಕ್ಕೂ ಹೆಚ್ಚು ವಿಡಿಯೋಗಳನ್ನು ವಿಶ್ಲೇಷಿಸಿದ್ದಾರೆ ಎಂದು ಬಹಿರಂಗಪಡಿಸಿದರು.
ನಟ ಅಲ್ಲು ಅರ್ಜುನ್ ಮುಖ್ಯಭೂಮಿಕೆಯಲ್ಲಿರುವ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್ ವೇಳೆ ಈ ಘಟನೆ ಸಂಭವಿಸಿದೆ. ನಟನ ಉಪಸ್ಥಿತಿಯು ಥಿಯೇಟರ್‌ಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಆಕರ್ಷಿಸಿತು. ಕಾಲ್ತುಳಿತದಿಂದ ರೇವತಿ ಸಾವನ್ನಪ್ಪಿದ್ದು, ಅವರ ಮಗ ಶ್ರೀತೇಜ್‌ಗೆ ಗಂಭೀರ ಗಾಯಗಳಾಗಿವೆ. ಘಟನೆಯ ಪ್ರಮುಖ ಕ್ಷಣಗಳುಳ್ಳ 10 ನಿಮಿಷಗಳ ವಿಡಿಯೋವನ್ನು ಆಯುಕ್ತರು ಹಂಚಿಕೊಂಡಿದ್ದಾರೆ. ಜೊತೆಗೆ ಘಟನೆಯನ್ನು ಅರ್ಥ ಮಾಡಿಕೊಳ್ಳಲು ವೀಕ್ಷಕರನ್ನು ಒತ್ತಾಯಿಸಿದ್ದಾರೆ.
ತನಿಖೆಯ ಪ್ರಮುಖ ಅಂಶಗಳು:
ಆರಂಭಿಕ ಎಚ್ಚರಿಕೆ ಕೊಡುವಲ್ಲಿ ನಿರ್ಲಕ್ಷ್ಯ
- ಫೆಬ್ರವರಿ 2ರಂದು, ಥಿಯೇಟರ್ ಮ್ಯಾನೇಜರ್ ಈವೆಂಟ್ ಆಯೋಜಿಸಲು ಅನುಮತಿಗಾಗಿ ಸ್ಥಳೀಯ ಪೊಲೀಸರಿಗೆ ಮನವಿ ಸಲ್ಲಿಸಿದ್ದರು.
- ಫೆಬ್ರವರಿ 3 ರಂದು, ಪೊಲೀಸರು ಥಿಯೇಟರ್‌ಗೆ ಭೇಟಿ ನೀದ್ದಾರೆ. ಪರಿಸ್ಥಿತಿಯನ್ನು ಗಮನಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಆಗಮನದಿಂದ ಆಗುವ ಸಂಭಾವ್ಯ ಸಮಸ್ಯೆಗಳನ್ನು ಅವಲೋಕಿಸಿ, ಅಲ್ಲು ಅರ್ಜುನ್‌ಗೆ ಆಹ್ವಾನ ನೀಡದಂತೆ ಸಲಹೆ ನೀಡಿದ್ದರು.
ಘಟನೆ ನಡೆದ ದಿನ:
- ಫೆಬ್ರವರಿ 4ರ ರಾತ್ರಿ 9:15ರ ಸುಮಾರಿಗೆ ಅಲ್ಲು ಅರ್ಜುನ್ ಅವರ ಕುಟುಂಬ ಸದಸ್ಯರು ಪ್ರತ್ಯೇಕ ಕಾರುಗಳಲ್ಲಿ ಸಂಧ್ಯಾ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಪರಿಣಾಮ, ಅಭಿಮಾನಿಗಳ ನೂಕುನುಗ್ಗಲು ಹೆಚ್ಚಿತು.
- 9:28ರ ಹೊತ್ತಿಗೆ, ಅಲ್ಲು ಅರ್ಜುನ್ ಮುಶಿರಾಬಾದ್ ಮೆಟ್ರೋ ನಿಲ್ದಾಣದ ಬಳಿ ತಮ್ಮ ಕಾರಿನ ಸನ್‌ರೂಫ್‌ನಿಂದ ಅಭಿಮಾನಿಗಳನ್ನು ಸ್ವಾಗತಿಸಿದರು. ಈ ಮೂಲಕ ಪ್ರೇಕ್ಷಕರ ಉತ್ಸಾಹವನ್ನು ಹೆಚ್ಚಿಸಿದರು.
ಕಾಲ್ತುಳಿತ:
- ರಾತ್ರಿ 9:35ಕ್ಕೆ, ಅಲ್ಲು ಅರ್ಜುನ್ ಥಿಯೇಟರ್‌ಗೆ ಪ್ರವೇಶಿಸುತ್ತಿದ್ದಂತೆ, ಕೆಳಗಿನ ಬಾಲ್ಕನಿಗೆ ಹೋಗುವ ಗ್ರಿಲ್ ಗೇಟ್‌ನತ್ತ ಪ್ರೇಕ್ಷಕರು ನುಗ್ಗಿದರು. ಗೇಟ್ ಅನ್ನು ಮುರಿದು ಕಾಲ್ತುಳಿತಕ್ಕೆ ಕಾರಣರಾದರು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
ಪ್ರಜ್ಞಾಹೀನ ಸ್ಥಿತಿಯಲ್ಲಿ ತಾಯಿಮಗ:
ರೇವತಿ ಮತ್ತು ಅವರ ಮಗ ಕಾಲ್ತುಳಿತದಲ್ಲಿ ಸಿಲುಕಿದರು. ಕೆಲ ಕ್ಷಣದಲ್ಲೇ ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ರೇವತಿಯನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ.
ಪೊಲೀಸರ ಪ್ರಯತ್ನ:
- ಅಧಿಕಾರಿಗಳು ಸಂತ್ರಸ್ತರಿಗೆ ಸಿಪಿಆರ್ ನಡೆಸಿ ಆಸ್ಪತ್ರೆಗೆ ಸಾಗಿಸಿದರು.
- ಎಸಿಪಿ ರಮೇಶ್ ಕುಮಾರ್ ಮತ್ತು ಸಿಐ ರಾಜು ನಾಯಕ್ ಅವರು ಅಲ್ಲು ಅರ್ಜುನ್‌ಗೆ ಸಾವಿನ ಬಗ್ಗೆ ತಿಳಿಸಲು ಪ್ರಯತ್ನಿಸಿದರು. ಆದರೆ ಅವರ ಮ್ಯಾನೇಜರ್ನಿಂದ ವಿಳಂಬವಾಯಿತು ಎಂದು ಅವರು ವಿವವರಿಸಿದರು.
ಇದನ್ನೂ ಓದಿ: ಅಬ್ಬಬ್ಬಾ! ಉಪೇಂದ್ರ ಸಾರಥ್ಯದ 'ಯುಐ' ಗಳಿಸಿದ್ದಿಷ್ಟು: ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯವೇನು?
ರೇವತಿ ಸಾವು ಮತ್ತು ಪರಿಸ್ಥಿತಿಯ ಗಂಭೀರತೆಯ ಬಗ್ಗೆ ತಿಳಿಸಲಾಗಿದ್ದರೂ ಕೂಡಾ ಅಲ್ಲು ಅರ್ಜುನ್ ಅವರು ಸಿನಿಮಾವನ್ನು ವೀಕ್ಷಿಸಲು ಒತ್ತಾಯಿಸಿದರು ಎಂದು ವರದಿಯಾಗಿದೆ.
ಅಂತಿಮವಾಗಿ ನಟ ಮಧ್ಯರಾತ್ರಿ 12:05 ಕ್ಕೆ ಥಿಯೇಟರ್‌ನಿಂದ ಹೊರಬಂದರು. ಘಟನೆ ನಡೆದ ಎರಡು ಗಂಟೆಗಳ ನಂತರ, ಅವರು ನಿರ್ಗಮಿಸುವಾಗ ಕಾರಿನಿಂದಲೇ ಅಭಿಮಾನಿಗಳಿಗೆ ಕೈ ಬೀಸಿದರು.
ಭಾವನಾತ್ಮಕ ಸಾಕ್ಷ್ಯಗಳು:
ಎಸಿಪಿ ರಮೇಶ್ ಕುಮಾರ್ ಮಾತನಾಡಿ, ''ನಾವು ಅಲ್ಲು ಅರ್ಜುನ್ ಅವರಿಗೆ ಪರಿಸ್ಥಿತಿ ಬಗ್ಗೆ ತಿಳಿಸಲು ಪ್ರಯತ್ನಿಸಿದೆವು. ಆದರೆ ಅವರ ಮ್ಯಾನೇಜರ್ ಮಾತುಕತೆ ವಿಳಂಬಗೊಳಿಸಿದರು. ನಂತರ, ನಾನು ನೇರವಾಗಿ ಮಧ್ಯಪ್ರವೇಶಿಸಿ ದುರಂತದ ಬಗ್ಗೆ ಅವರಿಗೆ ತಿಳಿಸಬೇಕಾಯಿತು'' ಎಂದು ವಿವರಿಸಿದರು.
ಇದನ್ನೂ ಓದಿ: ರಿಷಬ್ ಶೆಟ್ರ ಬಹುಸಮಯದ ಕನಸು ನನಸು: ಕೆರಾಡಿ ಗ್ರಾಮಸ್ಥರು ಸಾಥ್ - ಡಿವೈನ್ ಸ್ಟಾರ್ ಮನದಾಳ ಇಲ್ಲಿದೆ
ಸಿಐ ರಾಜು ನಾಯ್ಕ್ ಮಾತನಾಡಿ, ''ಸಂಭಾವ್ಯ ಅವ್ಯವಸ್ಥೆ ಅಂದಾಜಿನ ಮೇರೆಗೆ ನಾವು ಥಿಯೇಟರ್‌ನ ವಿನಂತಿಯನ್ನು (ಕಾರ್ಯಕ್ರಮ ಆಯೋಜಿಸಲು) ತಿರಸ್ಕರಿಸಿದ್ದೆವು. ರೇವತಿ ಅವರನ್ನು ಉಳಿಸಲಾಗಲಿಲ್ಲ ಎಂಬ ನೋವು ಇನ್ನೂ ನನ್ನನ್ನು ಕಾಡುತ್ತಿದೆ'' ಎಂದು ತಿಳಿಸಿದ್ದಾರೆ.