ಜಮ್ಮು:ಜಮ್ಮು ಮತ್ತು ಕಾಶ್ಮೀರದಲ್ಲಿ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಸಿಎಂ ಒಮರ್ ಅಬ್ದುಲ್ಲಾ ಅವರು ಭಾಗವಹಿಸಬೇಕಿದ್ದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಹುಸಿ ಬಾಂಬ್ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆ ಭದ್ರತಾ ಪಡೆಗಳು ತೀವ್ರ ತಪಾಸಣೆ ನಡೆಸಿವೆ.
ಕೇಂದ್ರಾಡಳಿತ ಪ್ರದೇಶದ ಎಂಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ರಾಷ್ಟ್ರಧ್ವಜ ಹಾರಿಸಿ ಗೌರವ ವಂದನೆ ಸ್ವೀಕರಿಸಿದರು. ಇದಕ್ಕೂ ಮೊದಲು ಕ್ರೀಡಾಂಗಣದಲ್ಲಿ ಬಾಂಬ್ ಇಟ್ಟಿರುವ ಬೆದರಿಕೆ ಹಾಕಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಬಾಂಬ್ ಬೆದರಿಕೆಯ ಇ-ಮೇಲ್ ಅನ್ನು ಶನಿವಾರ ರಾತ್ರಿ 'ಡೈಸ್ ಲಿಶ್' ಎಂಬ ಬಳಕೆದಾರನ ಹೆಸರಿನಲ್ಲಿ ಉನ್ನತ ಶಿಕ್ಷಣ ಕಾರ್ಯದರ್ಶಿ ಮತ್ತು ಉನ್ನತ ಶಿಕ್ಷಣ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕೃತ ಇ-ಮೇಲ್ ಖಾತೆಗಳಿಗೆ ಕಳುಹಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಕ್ರೀಡಾಂಗಣಕ್ಕೆ ಬಿಗಿಭದ್ರತೆ ಒದಗಿಸಲಾಗಿತ್ತು. ಬಾಂಬ್ ಪತ್ತೆ ದಳವು ತೀವ್ರ ಶೋಧ ನಡೆಸಿತು. ಸ್ಥಳದಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಇದೊಂದು ಸುಳ್ಳು ಬೆದರಿಕೆ ಸಂದೇಶವಾಗಿತ್ತು ಎಂದು ದೃಢಪಡಿಸಿದ್ದಾರೆ.