ಸೂರತ್ (ಗುಜರಾತ್): ಉದ್ಯೋಗದ ಹೆಸರಲ್ಲಿ ಮೋಸ ಹೋಗಿ ರಷ್ಯಾ ಸೇನೆಗೆ ಸೇರ್ಪಡೆಯಾಗಿ ಸಾವನ್ನಪ್ಪಿದ್ದ ಗುಜರಾತ್ ಮೂಲದ ಯುವಕನ ಮೃತದೇಹವು 25 ದಿನಗಳ ನಂತರ ತವರಿಗೆ ಆಗಮಿಸಿದ್ದು, ಇಂದು ಸೂರತ್‌ನಲ್ಲಿ ಕುಟುಂಬಸ್ಥರು ಯುವಕನ ಅಂತ್ಯಸಂಸ್ಕಾರ ನೆರವೇರಿಸಿದರು. ಇದೇ ವೇಳೆ, ತಮ್ಮ ನೋವಿನ ನಡುವೆಯೂ ಸಂಬಂಧಿಕರು, ಯಾವುದೇ ಯುವಕರನ್ನು ವಿದೇಶಕ್ಕೆ ಕರೆದೊಯ್ದು ದಾರಿತಪ್ಪಿಸಬೇಡಿ ಎಂದು ಮನವಿ ಮಾಡಿದರು.
23 ವರ್ಷದ ಹ್ಯಾಮಿಲ್ ಮಂಗುಕಿಯಾ ಮೃತ ಯುವಕನಾಗಿದ್ದಾನೆ. ಫೆಬ್ರವರಿ 21ರಂದು ರಷ್ಯಾ-ಉಕ್ರೇನ್ ಗಡಿಯಲ್ಲಿ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದ. ಈ ವಿಷಯ ತಿಳಿದು ಕುಟುಂಬಸ್ಥರು ಮೃತದೇಹವನ್ನು ತವರಿಗೆ ತರಲು ಖುದ್ದು ರಷ್ಯಾದ ಮಾಸ್ಕೋಗೆ ತೆರಳಿದ್ದರು. ಹ್ಯಾಮಿಲ್ ತಂದೆ ಅಶ್ವಿನ್‌ಭಾಯ್ ಮಂಗುಕಿಯಾ ಮತ್ತು ಚಿಕ್ಕಪ್ಪ ಇಬ್ಬರೂ ಮಾಸ್ಕೋಗೆ ಹೋಗಿ ಪಾರ್ಥಿವ ಶರೀರವನ್ನು ಪಡೆಯಲೆಂದು ಅಧಿಕಾರಿಗಳಿಗೆ ದಾಖಲೆಗಳನ್ನು ಸಲ್ಲಿಸಿದ್ದರು.
ಶನಿವಾರ ವಿಮಾನದ ಮೂಲಕ ಹ್ಯಾಮಿಲ್ ಮೃತದೇಹವನ್ನು ತವರು ರಾಷ್ಟ್ರಕ್ಕೆ ತರಲಾಗಿತ್ತು. ಬಳಿಕ ದೆಹಲಿಯಿಂದ ಸೂರತ್ ನಗರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಬಳಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಇಂದು ಬೆಳಗ್ಗೆ ಪಾರ್ಥಿವ ಶರೀರವನ್ನು ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿದರು. ಈ ವೇಳೆ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ರಷ್ಯಾಗೆ ಕಳುಹಿಸಿ ಯುದ್ಧಕ್ಕೆ ತಳ್ಳಿದ್ದರು:ಹ್ಯಾಮಿಲ್ ಮಂಗುಕಿಯಾ ಸೂರತ್‌ನ ಶಿವ ಬಾಂಗ್ಲಾ ನಿವಾಸಿ. ಚಿಕ್ಕಂದಿನಿಂದಲೂ ವಿದೇಶದಲ್ಲಿ ಕೆಲಸ ಮಾಡುವ ಆಸೆ ಹೊಂದಿದ್ದರು. ಹೀಗಾಗಿ ಕೆನಡಾ ಮತ್ತು ಪೋಲೆಂಡ್‌ಗೆ ತೆರಳಲು ವೀಸಾಗಳನ್ನು ಪಡೆದಿದ್ದರು. ಆದರೆ, ಅಲ್ಲಿ ಹ್ಯಾಮಿಲ್ಗೆ ಯಾವುದೇ ಆಕರ್ಷಕ ಉದ್ಯೋಗಾವಕಾಶಗಳು ಸಿಕ್ಕಿರಲಿಲ್ಲ. ಆದ್ದರಿಂದ ರಷ್ಯಾಕ್ಕೆ ಹೋಗಲು ನಿರ್ಧರಿಸಿದ್ದರು. ಬಳಿಕ ಡಿಸೆಂಬರ್ 23ರಂದು ರಷ್ಯಾದ ಸೇನೆಗೆ ಭದ್ರತಾ ಸಹಾಯಕ ಹುದ್ದೆಗೆ ಸೇರಿದ್ದರು. ಅಲ್ಲಿಂದ ಉಕ್ರೇನ್ ಜೊತೆಗೆ ರಷ್ಯಾ ಮಾಡುತ್ತಿರುವ ಯುದ್ಧಕ್ಕೆ ತಳ್ಳಲಾಗಿತ್ತು. ರಷ್ಯಾ-ಉಕ್ರೇನ್ ಗಡಿಯಲ್ಲಿ ನಿಯೋಜನೆ ಮಾಡಲಾಗಿತ್ತು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಮೂರು ತಿಂಗಳ ಹಿಂದೆ ಹ್ಯಾಮಿಲ್ನನ್ನು ಕುಟುಂಬಸ್ಥರು ವಿದೇಶಕ್ಕೆ ತೆರಳಲು ತವರಿನಿಂದ ಬೀಳ್ಕೊಟ್ಟಿದ್ದರು. ಆದರೆ, ಹೀಗೆ ಆತ ಶವಪೆಟ್ಟಿಗೆಯಲ್ಲಿ ಮನೆಗೆ ಹಿಂದಿರುಗುತ್ತಾನೆ ಎಂದು ಎಂದಿಗೂ ಊಹೆ ಕೂಡ ಮಾಡಿರಲಿಲ್ಲ ಎಂದು ಕುಟುಂಬದ ಸದಸ್ಯರು ಹೇಳಿಕೊಂಡರು. ಹ್ಯಾಮಿಲ್‌ನ ತಾಯಿ ಭಗವತಿ ಬೆನ್ ಖುದ್ದು ಮಾತನಾಡಿ, ''ನನ್ನ ಮಗನನ್ನು ಕೆಲಸಕ್ಕಾಗಿ ರಷ್ಯಾಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಬಳಿಕ ಯುದ್ಧಭೂಮಿಯಲ್ಲಿ ಸಾಯಲು ತಳ್ಳಿದ್ದಾರೆ. ನನ್ನಂತೆ ಬೇರೆ ಯಾವ ತಾಯಿಯೂ ತನ್ನ ಮಗನನ್ನು ಈ ರೀತಿಯಲ್ಲಿ ಕಳೆದುಕೊಳ್ಳಬಾರದು. ಯಾವುದೇ ಯುವಕರನ್ನು ವಿದೇಶಕ್ಕೆ ಕರೆದೊಯ್ಯುವಾಗ ದಾರಿತಪ್ಪಿಸಬೇಡಿ'' ಎಂದು ಕಣ್ಣೀರು ಹಾಕಿದರು.
ಇನ್ನು, ಹೀಗೆ ಕೆಲಸದ ಹೆಸರಲ್ಲಿ ಹೋಗಿ ರಷ್ಯಾ - ಉಕ್ರೇನ್ ಯುದ್ಧದಲ್ಲಿ ಸುಮಾರು 12 ಜನ ಭಾರತೀಯ ಯುವಕರು ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗ ಹೈದರಾಬಾದ್ ನಿವಾಸಿ ಮೊಹಮ್ಮದ್ ಅಸ್ಫಾನ್ ಎಂಬಾತ ಕೂಡ ಯುದ್ಧದಲ್ಲಿ ಮೃತಪಟ್ಟಿರುವುದು ಖಚಿತಪಟ್ಟಿದೆ. ಇದರ ಬೆನ್ನಲ್ಲೇ ಭಾರತ ಸರ್ಕಾರವು, ರಷ್ಯಾ-ಉಕ್ರೇನ್ ಯುದ್ಧದಿಂದ ದೂರವಿರಲು ಮತ್ತು ರಷ್ಯಾದ ಸೇನೆದ ಬೆಂಬಲ ಉದ್ಯೋಗಗಳಿಂದ ದೂರ ಇರುವಂತೆ ಎಂದು ಭಾರತೀಯರಿಗೆ ಮನವಿ ಮಾಡಿದೆ.
ಇದನ್ನೂ ಓದಿ:ಉದ್ಯೋಗದ ಹೆಸರಲ್ಲಿ ರಷ್ಯಾಗೆ ಕಳುಹಿಸಿ ಯುದ್ಧಕ್ಕೆ ತಳ್ಳಿದ್ರು: ಭಾರತೀಯ ಯುವಕ ಸಾವು