ಛತ್ತೀಸ್‌ಗಢ: ಗನ್‌ಪೌಡರ್ ಕಾರ್ಖಾನೆಯಲ್ಲಿ ಭೀಕರ ಸ್ಫೋಟ (ETV Bharat) ಬೆಮೆತಾರಾ (ಛತ್ತೀಸ್‌ಗಢ): ಗನ್‌ಪೌಡರ್ ಕಾರ್ಖಾನೆಯೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿ ಓರ್ವ ಸಾವನ್ನಪ್ಪಿ, ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಛತ್ತೀಸ್‌ಗಢದ ಬೆಮೆತಾರಾ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಸ್ಫೋಟದ ಭೀಕರತೆಗೆ ಸುಮಾರು 40 ಅಡಿ ಆಳದ ಕುಳಿ ಬಿದ್ದಿದೆ. ಅಲ್ಲದೇ, ಈ ಪಕ್ಕ-ಅಕ್ಕದ ಮನೆಗಳು ಸಹ ನಡುಗಿದ್ದು, ಜನತೆ ಮನೆಗಳಿಂದ ಹೊರ ಓಡಿ ಬಂದಿದ್ದಾರೆ.
ಇಲ್ಲಿನ ಸ್ಪೆಷಲ್ ಬ್ಲಾಸ್ಟ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಬೆಳಗ್ಗೆ ಸುಮಾರಿಗೆ 8 ಗಂಟೆಗೆ ಈ ಸ್ಫೋಟ ಉಂಟಾಗಿದೆ. ಮಾಹಿತಿ ಪ್ರಕಾರ, ಸ್ಫೋಟದಿಂದ ಕಾರ್ಖಾನೆಯಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿದಿದೆ. ಸ್ಫೋಟ ಸಂಭವಿಸಿದಾಗ ಕನಿಷ್ಠ 100 ಮಂದಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಕೆಲವು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟದ ಪರಿಣಾಮವು ಸುಮಾರು 4 ಕಿಲೋಮೀಟರ್ವರೆಗೂ ಉಂಟಾಗಿದೆ ಎಂದು ಮತ್ತೆ ಕೆಲವರು ಹೇಳಿದ್ದಾರೆ.
ಅಲ್ಲದೇ, ಸ್ಫೋಟದ ದೃಶ್ಯಗಳು ಸಿಸಿಟಿವಿ ಮತ್ತು ಮೊಬೈಲ್ ಕ್ಯಾಮರಾದಲ್ಲೂ ಸೆರೆಯಾಗಿವೆ. ದೊಡ್ಡ ಸ್ಫೋಟದೊಂದಿಗೆ ಮುಗಿಲೆತ್ತರಕ್ಕೆ ದಟ್ಟವಾಗಿ ಹೊಗೆ ಆವರಿಸಿದ ದೃಶ್ಯಗಳು ಕಾಣಬಹುದಾಗಿದೆ. ಜೊತೆಗೆ ಭಯದಿಂದ ಜನರು ಓಡಾಟವೂ ವಿಡಿಯೋಗಳಲ್ಲಿ ದಾಖಲಾಗಿದೆ. ಆದರೆ, ಇದುವರೆಗೆ ಸ್ಫೋಟಕ ನಿಖರ ಕಾರಣ ತಿಳಿದು ಬಂದಿಲ್ಲ.
ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ: ಸ್ಫೋಟದಿಂದ ತೀವ್ರತೆಗೆ ಓರ್ವ ಮೃತಪಟ್ಟಿದ್ದು, ಉಳಿದ ಆರು ಜನ ಗಾಯಾಳುಗಳನ್ನು ರಾಯ್‌ಪುರದ ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಪೈಕಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯ್‌ಪುರ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್)ಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಅರುಣ್ ಸಾವೋ, ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಅಲ್ಲದೇ, ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ಮತ್ತು ಜಿಲ್ಲಾಡಳಿತದ ತಂಡಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ಅವಶೇಷಗಳ ತೆರವುಗೊಳಿಸಿದ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿಗಳನ್ನು ನೀಡಿ ಸರ್ಕಾರದಿಂದ ಚಿಕಿತ್ಸೆ ಕೊಡಿಸಲಾಗುವುದು ಎಂದು ಡಿಸಿಎಂ ಹೇಳಿದರು.
ಇದನ್ನೂ ಓದಿ:ಸೋಲಾರ್ ಸ್ಪೋಟಕ ತಯಾರಿಕಾ ಕಂಪನಿಯಲ್ಲಿ ಸ್ಪೋಟ: 9 ಮಂದಿ ಸಾವು, ತಲಾ ₹5 ಲಕ್ಷ ಪರಿಹಾರ ಘೋಷಣೆ