ತಿರುವನಂತಪುರಂ, ಕೇರಳ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ತ್ರಿಶೂರ್ನಿಂದ ಗೆಲುವು ಸಾಧಿಸಿರುವುದು ಮತ್ತು ರಾಜ್ಯದ ಹಲವು ಕ್ಷೇತ್ರಗಳಲ್ಲಿ ತನ್ನ ಮತ ಗಳಿಕೆ ಹೆಚ್ಚಿಸಿಕೊಂಡಿರುವುದು ಕೇರಳ ರಾಜಕೀಯದಲ್ಲಿ ಹೊಸ ಬದಲಾವಣೆಯಾಗುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ ಎಂದು ಖ್ಯಾತ ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
ನಟ ಹಾಗೂ ರಾಜಕಾರಣಿ ಸುರೇಶ್ ಗೋಪಿ ತ್ರಿಶೂರ್ನಿಂದ ಗೆದ್ದಿರುವುದು ಮಾತ್ರವಲ್ಲದೇ, 2019 ಕ್ಕೆ ಹೋಲಿಸಿದರೆ ಬಿಜೆಪಿಯ ಮತಗಳಿಕೆ ಪ್ರಮಾಣವು ಶೇ 15 ರಿಂದ ಶೇ 20 ಕ್ಕೆ ಏರಿಕೆಯಾಗಿದೆ. ಕೇರಳದ ರಾಜಕೀಯ ಕ್ಷೇತ್ರವು ಸಾಂಪ್ರದಾಯಿಕ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸಿಪಿಐ (ಎಂ) ನೇತೃತ್ವದ ಎಲ್ಡಿಎಫ್ ಪ್ರಾಬಲ್ಯದ ದ್ವಿಪಕ್ಷೀಯ ಪೈಪೋಟಿಯ ಬದಲಾಗಿ ತ್ರಿಕೋನ ಪೈಪೋಟಿಗೆ ಬದಲಾಗುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. 2011 ರ ವಿಧಾನಸಭಾ ಚುನಾವಣೆಯ ನಂತರದಿಂದ ಕ್ರಮೇಣವಾಗಿ ನಡೆಯುತ್ತಿರುವ ಈ ಬದಲಾವಣೆ ಈಗ ಹೆಚ್ಚು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಎನ್ಡಿಎ ಕೇರಳದ ಮತದಾರರನ್ನು ಒಲಿಸಿಕೊಳ್ಳುವಲ್ಲಿ ನಿಧಾನವಾಗಿ ಸಫಲವಾಗುತ್ತಿರುವುದು 2024 ರ ಲೋಕಸಭಾ ಚುನಾವಣಾ ಫಲಿತಾಂಶಗಳು ದೃಢಪಡಿಸಿವೆ. ಎನ್ಡಿಎ ಅಭ್ಯರ್ಥಿಗಳು ತಾವು ಸ್ಪರ್ಧಿಸಿದ ಅನೇಕ ಕ್ಷೇತ್ರಗಳಲ್ಲಿ ಸುಮಾರು 20 ಪ್ರತಿಶತದಷ್ಟು ಮತಗಳನ್ನು ಗಳಿಸಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ರೆಡಿಯಾಗಿದೆ ತಳಮಟ್ಟದ ಕಾರ್ಯಕರ್ತರ ಪಡೆ:ವಿಶ್ಲೇಷಕರ ಪ್ರಕಾರ ಎನ್ಡಿಎ ಗೆದ್ದ ತ್ರಿಶೂರ್ ಕ್ಷೇತ್ರ ಮತ್ತು ಅಟ್ಟಿಂಗಲ್ ಹಾಗೂ ಅಲಪ್ಪುಳದಂಥ ಕ್ಷೇತ್ರಗಳಲ್ಲಿ ಮತ ಗಳಿಕೆ ಪ್ರಮಾಣ ಹೆಚ್ಚಾಗಿರುವುದು ಬಿಜೆಪಿಗೆ ಉತ್ತೇಜನ ನೀಡಿದೆ. ಜಾರ್ಖಂಡ್ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾದ 'ತಳಮಟ್ಟದ ಹಿಂದುತ್ವ' ಕಾರ್ಯತಂತ್ರವು ಕೇರಳದಲ್ಲಿಯೂ ಪರಿಣಾಮಕಾರಿಯಾಗುತ್ತಿರುವಂತೆ ಕಂಡು ಬರುತ್ತಿದೆ ಎನ್ನುತ್ತಾರೆ ರಾಜಕೀಯ ತಜ್ಞರು.
ತ್ರಿಶೂರ್ನಲ್ಲಿ ಬಿಜೆಪಿ ಶೇ 37.8ರಷ್ಟು ಮತಗಳನ್ನು ಗಳಿಸಿದೆ. ತಿರುವನಂತಪುರಂನಲ್ಲಿ ಶೇ 35.52ರಷ್ಟು ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಎಡಪಕ್ಷಗಳ ಭದ್ರಕೋಟೆಯಾದ ಅಟ್ಟಿಂಗಲ್ನಲ್ಲಿ ಬಿಜೆಪಿ ಅಭ್ಯರ್ಥಿ ಶೇ 31.64ರಷ್ಟು ಮತಗಳನ್ನು ಪಡೆದು, ಗೆದ್ದ ಯುಡಿಎಫ್ ಅಭ್ಯರ್ಥಿಗಿಂತ ಕೇವಲ ಶೇ 1.65ರಷ್ಟು ಹಿಂದಿದ್ದಾರೆ. ಸಿಪಿಐ (ಎಂ) ಮತ್ತು ಕಾಂಗ್ರೆಸ್ನ ಮತ್ತೊಂದು ಭದ್ರಕೋಟೆಯಾದ ಅಲಪ್ಪುಳದಲ್ಲಿ ಬಿಜೆಪಿ ಅಭ್ಯರ್ಥಿ ಶೇಕಡಾ 28.3 ರಷ್ಟು ಮತಗಳನ್ನು ಗಳಿಸಿದ್ದಾರೆ.
ಒಂದು ಕಾಲದಲ್ಲಿ ಕೇರಳದಲ್ಲಿ ಎಡಪಕ್ಷಗಳ ಬದ್ಧ ಮತ ಬ್ಯಾಂಕ್ ಆಗಿದ್ದ ಅಲ್ಪಸಂಖ್ಯಾತ ಕ್ರಿಶ್ಚಿಯನ್ನರು, ಸಾಂಪ್ರದಾಯಿಕ ಕಾಂಗ್ರೆಸ್ ಬೆಂಬಲಿಗರು ಮತ್ತು ಒಬಿಸಿಗಳ ಮತ ಚಲಾವಣೆಯ ಆದ್ಯತೆಗಳಲ್ಲಿ ಬದಲಾವಣೆ ಕಂಡುಬಂದಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಕ್ರಿಶ್ಚಿಯನ್ ಮತಗಳು ಬಿಜೆಪಿಯತ್ತ:"2011 ರ ವಿಧಾನಸಭಾ ಚುನಾವಣೆಯಿಂದಲೂ ನಾವು ಈ ಬದಲಾವಣೆಯನ್ನು ಗಮನಿಸುತ್ತಿದ್ದೇವೆ. ಎಡಪಕ್ಷಗಳು ತಮ್ಮ ಒಬಿಸಿ ಮತಗಳಲ್ಲಿ ಸುಮಾರು ಶೇ 20 ರಷ್ಟು ಮತಗಳನ್ನು ಕಳೆದುಕೊಂಡಿದ್ದವು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಅವು ಇದನ್ನು ಸರಿದೂಗಿಸಿದ್ದವು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಗಳು ವ್ಯಾಪಕವಾಗಿ ಕಂಡು ಬಂದಿರುವುದು ಕೂಡ ಗಮನಾರ್ಹ" ಎಂದು ಕೇರಳ ವಿಶ್ವವಿದ್ಯಾಲಯದ ಪ್ರಮುಖ ಸೆಫಾಲಜಿಸ್ಟ್ ಸಜಾದ್ ಇಬ್ರಾಹಿಂ ತಿಳಿಸಿದ್ದಾರೆ. ತ್ರಿಶೂರ್ ಮತ್ತು ತಿರುವನಂತಪುರಂನಂಥ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಮತಗಳು ಬಿಜೆಪಿಯತ್ತ ವಾಲಿರುವುದು ಬಹಳ ಸ್ಪಷ್ಟವಾಗಿದೆ.
"ಕೇರಳದ ಕ್ರಿಶ್ಚಿಯನ್ ಸಮುದಾಯದಲ್ಲಿ ಮೇಲ್ಜಾತಿಯ ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿದ್ದಾರೆ. ಈ ಕ್ರಿಶ್ಚಿಯನ್ನರ ಧಾರ್ಮಿಕ ಆಚರಣೆಗಳಲ್ಲಿ ಹಿಂದೂ ಧಾರ್ಮಿಕ ಆಚರಣೆಗಳು ಬೆರೆತಿರುವುದರಿಂದ ಅವರು ಬಿಜೆಪಿಯೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವುದು ಸುಲಭವಾಗುತ್ತಿದೆ. ರಾಜಕೀಯದ ವಿಷಯಕ್ಕೆ ಬಂದಾಗ ಈ ಅಂಶಗಳು ವಾಸ್ತವಿಕವಾಗಿ ಕೆಲಸ ಮಾಡುತ್ತಿವೆ" ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು ಪ್ರಸಿದ್ಧ ಸೆಫಾಲಜಿಸ್ಟ್ ಡಾ. ಜಿ. ಗೋಪಕುಮಾರ್ ಹೇಳಿದರು.
ಕೇರಳದಲ್ಲಿ ಬಿಜೆಪಿ ತನ್ನ ಧಾರ್ಮಿಕ ಮೂಲಭೂತವಾದವನ್ನು ಬದಿಗಿಟ್ಟು ಅಲ್ಪಸಂಖ್ಯಾತರು, ಒಬಿಸಿಗಳು ಮತ್ತು ದಲಿತರನ್ನು ತಲುಪಲು ಮಾಡಿದ ಪ್ರಯತ್ನಗಳು ಹೆಚ್ಚಿನ ರಾಜಕೀಯ ನೆಲೆ ಕಂಡುಕೊಳ್ಳಲು ಅದಕ್ಕೆ ಸಹಾಯ ಮಾಡಿದೆ ಎಂದು ಅವರು ಹೇಳಿದರು.