ನವದೆಹಲಿ:ಅದಾನಿ-ಹಿಂಡೆನ್‌ಬರ್ಗ್ ವಿಷಯವನ್ನಿಟ್ಟುಕೊಂಡು ದೇಶದ ಆರ್ಥಿಕತೆಯನ್ನು ಹಾಳು ಮಾಡಲು ಕಾಂಗ್ರೆಸ್ ಪಿತೂರಿ ನಡೆಸಿದೆ. ಭಾರತೀಯ ಷೇರು ಮಾರುಕಟ್ಟೆ ಕುಸಿಯಲು ಅದರ ನಾಯಕರು ಬಯಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದರ ಜೊತೆಗೆ, ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ನೀಡಬೇಕೆಂಬ ವಿಪಕ್ಷಗಳ ಬೇಡಿಕೆಯನ್ನೂ ತಿರಸ್ಕರಿಸಿದೆ.
ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ಅವರು ಅದಾನಿ ಗ್ರೂಪ್ನ ಬೇನಾಮಿ ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದರಿಂದಾಗಿ ಅವರು ಕಳೆದ ವರ್ಷ ಗ್ರೂಪ್ ವಿರುದ್ಧ ಕೇಳಿಬಂದ ಆರೋಪಗಳಿಗೆ ಕ್ಲೀನ್ಚಿಟ್ ನೀಡಿದ್ದಾರೆ ಎಂದು ಹಿಂಡೆನ್‌ಬರ್ಗ್ ಆರೋಪ ಮಾಡಿದೆ. ಇದರ ವಿರುದ್ಧ ಮುಗಿಬಿದ್ದಿರುವ ವಿಪಕ್ಷಗಳು ಪ್ರಕರಣವನ್ನು ಜೆಪಿಸಿ ತನಿಖೆಗೆ ನೀಡಬೇಕು ಎಂದು ಕೋರುತ್ತಿವೆ. ಜೊತೆಗೆ ಹಿಂಡೆನ್‌ಬರ್ಗ್ ವರದಿಗೆ ಬೆಂಬಲಿಸುವ ಮಾದರಿಯಲ್ಲಿ ಮಾತನಾಡುತ್ತಿವೆ.
ದೇಶದ ಆರ್ಥಿಕತೆ ವಿರುದ್ಧ ಪಿತೂರಿ:ಈ ಬಗ್ಗೆ ಮಾತನಾಡಿರುವ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಜಾರ್ಜ್ ಸೊರೊಸ್ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಭಾರತದ ಆರ್ಥಿಕತೆಯನ್ನು ದುರ್ಬಲಗೊಳಿಸುವ ದೊಡ್ಡ ಪಿತೂರಿ ನಡೆದಿದೆ. ಜಾರ್ಜ್ ಸೊರೊಸ್ ಭಾರತ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಇದಕ್ಕೆ ವಿಪಕ್ಷಗಳು ಬೆಂಬಲಿಸುತ್ತಿವೆ. ದೇಶದ ಷೇರು ಮಾರುಕಟ್ಟೆ ಕುಸಿಯಬೇಕೆಂದು ಪ್ರಮುಖ ವಿಪಕ್ಷ ಕಾಂಗ್ರೆಸ್ ಬಯಸುತ್ತಿದೆ ಎಂದು ಆರೋಪಿಸಿದರು.