ಭುವನೇಶ್ವರ(ಒಡಿಶಾ):ಲೋಕಸಭೆಯ ಚುನಾವಣೆಯ ಮೂರನೇ ಹಂತದ ಮತದಾನದ ವೇಳೆ ಒಡಿಶಾದ ಖೋರ್ಧಾ ಜಿಲ್ಲೆಯ ಮತಗಟ್ಟೆಯಲ್ಲಿ ಇವಿಎಂ ಹಾನಿಗೊಳಿಸಿರುವ ಆರೋಪದಡಿ ಬಿಜೆಪಿ ಶಾಸಕ ಪ್ರಶಾಂತ ಜಗದೇವ್ ಅವರನ್ನು ಬಂಧಿಸಲಾಗಿದೆ.
ಚಿಲಿಕಾ ಶಾಸಕ ಬಿಜೆಪಿ ಅಭ್ಯರ್ಥಿ ಜಗದೇವ್ ಅವರು ತಮ್ಮ ಪತ್ನಿಯೊಂದಿಗೆ ಶನಿವಾರ ಮಧ್ಯಾಹ್ನ 3 ಗಂಟೆಗೆ ಮತ ಚಲಾಯಿಸಲು ಮತಗಟ್ಟೆಗೆ ತೆರಳಿದ್ದರು. ಈ ವೇಳೆ ಇವಿಎಂ ಧ್ವಂಸ ಮಾಡಿರುವ ಕುರಿತು ಕನೋರಿಪಟ್ನಾ ಬೂತ್ ಸಂಬಂಧಿತ ಅಧ್ಯಕ್ಷರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಜಗದೇವ್ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಿದ್ದು, ವಿಚಾರಣೆ ಮುಂದುವರಿದಿದೆ.
ಶಾಸಕ ಪ್ರಶಾಂತ್ ಜಗದೇವ್ ಇವಿಎಂ ಧ್ವಂಸಗೊಳಿಸಿರುವುದನ್ನು ಖಂಡಿಸಿ ಆಡಳಿತಾರೂಢ ಬಿಜೆಡಿ ಸರ್ಕಾರ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಆದರೆ ಶಾಸಕರ ವಿರುದ್ಧ ಬೇಕಂತಲೇ ಮಾಡಿರುವ ಷಡ್ಯಂತ್ರ ಇದಾಗಿದೆ. ಇದೊಂದು ರಾಜಕೀಯ ಪ್ರೇರಿತ ದೂರು ಎಂದು ಕೌಂರಿ ಪಟ್ಟಣದ ಗ್ರಾಮಸ್ಥರು ಆರೋಪಿಸಿದ್ದಾರೆ.
ಎರಡು ಬಾರಿ ಶಾಸಕ ಆಗಿರುವ ಪ್ರಶಾಂತ ಜಗದೇವ್ ಅವರು ಹಿಂದೆಯೂ ಬಿಜೆಪಿ ಬೆಂಬಲಿತ ಗುಂಪಿನ ಮೇಲೆ ಕಾರು ಹತ್ತಿಸಿ ಬಂಧನಕ್ಕೊಳಗಾಗಿದ್ದರು. ಮಾರ್ಚ್ 2022ರಲ್ಲಿ ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ಖೋರ್ಧಾದ ಬಾನಾಪುರ ಬ್ಲಾಕ್ ಕಚೇರಿಯ ಹೊರಗೆ ಸೇರಿದ್ದ ಬಿಜೆಪಿ ಬೆಂಬಲಿತ ಗುಂಪಿನ ಮೇಲೆ ಕಾರನ್ನು ಹತ್ತಿಸಿದ ಪರಿಣಾಮ 20 ಜನರು ಗಾಯಗೊಂಡಿದ್ದರು. ಕಾರು ಹತ್ತಿಸಿದ ಆರೋಪದಡಿ ಶಾಸಕ ಪ್ರಶಾಂತ ಜಗದೇವ್ ಅವರನ್ನು ಬಂಧಿಸಲಾಗಿತ್ತು. ಇದಾದ ನಂತರ ಅವರನ್ನು ಆಡಳಿತಾರೂಢ ಬಿಜೆಡಿಯಿಂದ ಉಚ್ಛಾಟಿಸಲಾಗಿತ್ತು.