ನವದೆಹಲಿ: ಹೊಸ ವರ್ಷ ಸ್ವಾಗತಿಸಲು ರಾಷ್ಟ್ರ ರಾಜಧಾನಿ ಸನ್ನದ್ಧವಾಗಿದೆ. ಈ ನಡುವೆ ನಗರದ ನಾಗರಿಕರ ಸುರಕ್ಷತೆ, ಸುಗಮ ಆಚರಣೆ ಮತ್ತು ಪರಿಣಾಮಕಾರಿ ಜನಸಂದಣಿ ನಿರ್ವಹಣೆಗಾಗಿ ದೆಹಲಿ ಪೊಲೀಸರು ನಗರದಾದ್ಯಂತ ಭದ್ರತಾ ವ್ಯವಸ್ಥೆ ಬಿಗಿಗೊಳಿಸಿದ್ದಾರೆ. ಇದಕ್ಕಾಗಿ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪ್ರಮುಖ ಪ್ರದೇಶಗಳಲ್ಲಿ ಹೆಚ್ಚುವರಿ ಗಸ್ತು ಮತ್ತು ವಿಶೇಷ ಘಟಕಗಳನ್ನು ನಿಯೋಜಿಸಲಾಗಿದೆ ಎಂದು ಡಿಸಿಪಿ (ದಕ್ಷಿಣ) ಅಂಕಿತ್ ಚೌಹಾಣ್ ಹೇಳಿದ್ದಾರೆ. ವಾಹನಗಳ ದಟ್ಟಣೆ ನಿಯಂತ್ರಿಸಲು ಮತ್ತು ಡಿಂಕ್ ಅಂಡ್ ಡ್ರೈವ್ ಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಗಟ್ಟಲು 21 ಆಯಕಟ್ಟಿನ ಸ್ಥಳಗಳಲ್ಲಿ ಭದ್ರತಾ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಕ್ವಿಕ್ ರಿಯಾಕ್ಷನ್ ಟೀಂಗಳು (ಕ್ಯೂಆರ್‌ಟಿಗಳು) 15 ನಿರ್ಣಾಯಕ ಪಾಯಿಂಟ್‌ಗಳಲ್ಲಿ ಸ್ಥಾಪಿಸಲಾಗಿದೆ. 38 ಪಿಸಿಆರ್ ವ್ಯಾನ್‌ಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ ಎಂದು ಡಿಸಿಪಿ ಅಂಕಿತ್ ಚೌಹಾಣ್ ಮಾಹಿತಿ ನೀಡಿದ್ದಾರೆ.
ದೆಹಲಿ ಭದ್ರತೆಗೆ 10 ಸಾವಿರ ಸಿಬ್ಬಂದಿ: ದೆಹಲಿಯಲ್ಲಿ 10,000ಕ್ಕೂ ಹೆಚ್ಚು ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅರೆಸೇನಾ ಪಡೆಗಳು ನಗರದ ಗಡಿಗಳಲ್ಲಿ ಬೀಡುಬಿಟ್ಟಿವೆ. ವಿಶೇಷ ವಾಹನಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಇತರ ಕಣ್ಗಾವಲು ಉಪಕರಣಗಳೊಂದಿಗೆ ಸುಸಜ್ಜಿತವಾದ ಮೇಲ್ವಿಚಾರಣೆ ಮತ್ತು ಗಸ್ತು ಹಾಕಲಾಗಿದೆ. ನಗರದಾದ್ಯಂತ ಪ್ರಮುಖ ಪ್ರದೇಶಗಳ ಮೇಲೆ ಕಣ್ಣಿಡಲು ವ್ಯವಸ್ಥೆ ಮಾಡಲಾಗಿದೆ.
ಕಾನೂನು ಉಲ್ಲಂಘಿಸಿದರೆ ಸುಮ್ಮನಿರಲ್ಲ- ಎಚ್ಚರಿಕೆ: 2025ಕ್ಕೆ ಸುರಕ್ಷಿತ ಮತ್ತು ಸಂತೋಷದಾಯಕ ಸ್ವಾಗತ ಕೋರಲು ಪೊಲೀಸ್ ಅಧಿಕಾರಿಗಳು ಸನ್ನದ್ದವಾಗಿದ್ದಾರೆ. ಕಾನೂನು ಉಲ್ಲಂಘನೆಗಳನ್ನು ಯಾವುದೇ ಕಾರಣ್ಕೂ ಸಹಿಸಲಾಗುವುದಿಲ್ಲ ಎಂದು ಇದೇ ವೇಳೆ ಡಿಸಿಪಿ ಎಚ್ಚರಿಕೆ ರವಾನಿಸಿದ್ದಾರೆ
31 ಪ್ರಮುಖ ಸ್ಥಳಗಳು ಸೇರಿದಂತೆ ಸಂಭ್ರಮಾಚರಣೆ ಮಾಡುವ ಸ್ಥಳಗಳಲ್ಲಿ ವಿಶೇಷ ನಿಗಾ ಇಡಲಾಗಿದೆ. 15 ಮಾಲ್‌ಗಳು, ಮೋಟೆಲ್‌ಗಳು, ಸಿನಿಮಾ ಹಾಲ್‌ಗಳು ಮತ್ತು ಇತರ ಜನಪ್ರಿಯ ಸ್ಥಳಗಳನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಬಸ್ ನಿಲ್ದಾಣಗಳು ಮತ್ತು ನಿರ್ಣಾಯಕ ರಸ್ತೆ ಮಾರ್ಗಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಇದಕ್ಕಾಗಿ 40 ಬೈಕ್ ಗಳೊಂದಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ಇಲ್ಲಿನ ಎಂಟು ಪ್ರಮುಖ ಹೋಟೆಲ್‌ಗಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ಅವರು ಹೇಳಿದರು.
ಇಷ್ಟೊಂದು ಸಿಬ್ಬಂದಿ: ಏಳು ಸಹಾಯಕ ಪೊಲೀಸ್ ಕಮಿಷನರ್‌ಗಳು, 40 ಇನ್‌ಸ್ಪೆಕ್ಟರ್‌ಗಳು, 223 ಸಬ್ಇನ್ಸ್ಪೆಕ್ಟರ್ ಗಳು ಮತ್ತು ಸಹಾಯಕ ಸಬ್ ಇನ್ಸ್ಪೆಕ್ಟರಗಳು ಮತ್ತು 130 ಮಹಿಳಾ ಸಿಬ್ಬಂದಿ ಇದ್ದಾರೆ ಎಂದು ಡಿಸಿಪಿ ಚೌಹಾಣ್ ಮಾಹಿತಿ ಒದಗಿಸಿದ್ದಾರೆ.
ನೆರೆಯ ರಾಜ್ಯಗಳಿಂದ ಆಗಮಿಸುವ ಜನರಿಂದ ಸಂಭಾವ್ಯ ಅಡಚಣೆಗಳನ್ನು ನಿರ್ವಹಿಸಲು ಹೆಚ್ಚುವರಿ ಬ್ಯಾರಿಕೇಡ್‌ಗಳು ಮತ್ತು ಪಿಕೆಟ್‌ಗಳೊಂದಿಗೆ 20 ಕ್ಕೂ ಹೆಚ್ಚು ಗಡಿ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಹೋಟೆಲ್‌ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗಳು ಕಾನೂನುಬದ್ಧವಾಗಿ ಮತ್ತು ಸರಿಯಾದ ದಾಖಲಾತಿಗಳೊಂದಿಗೆ ತಂಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ವಿಶೇಷ ಪೊಲೀಸ್ ಪಡೆಗಳು ತಪಾಸಣೆ ನಡೆಸುತ್ತವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಮನಮೋಹನ್ ಸಿಂಗ್ಗೆ 'ಭಾರತ ರತ್ನ' ನೀಡುವಂತೆ ಒತ್ತಾಯ: ತೆಲಂಗಾಣ ವಿಧಾನಸಭೆ ನಿರ್ಣಯ ಅಂಗೀಕಾರ