ಬೆಂಗಳೂರು:ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗಡೆ ವಿರುದ್ಧ ಶಾಸಕ ಸುರೇಶ್ ಕುಮಾರ್, ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವಥ್ ನಾರಾಯಣ ಹಾಗೂ ವಕ್ತಾರ ಎಸ್.ಪ್ರಕಾಶ್ ಅವರಿದ್ದ ಬಿಜೆಪಿ ನಿಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ. ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 50 ಕೋಟಿ ರೂಪಾಯಿ ಆಮಿಷವೊಡ್ಡಿದೆ ಎಂಬ ಸಿದ್ದರಾಮಯ್ಯ ಹೇಳಿಕೆಯ ಹಿನ್ನೆಲೆಯಲ್ಲಿ ಈ ದೂರು ನೀಡಲಾಗಿದೆ. ಕೋಟಾ ಶ್ರೀನಿವಾಸ ಪೂಜಾರಿ ಅವರ ಹಿಂದಿ ಮತ್ತು ಇಂಗ್ಲಿಷ್ ಭಾಷಾಜ್ಞಾನದ ಬಗ್ಗೆ ಜಯಪ್ರಕಾಶ್ ಹೆಗಡೆ ಟೀಕೆ ಮಾಡಿರುವ ಕಾರಣಕ್ಕೆ ಮತ್ತೊಂದು ದೂರು ನೀಡಲಾಗಿದೆ. ಇಬ್ಬರೂ ನಾಯಕರ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯಿಸಿದೆ.
ಶಾಸಕ ಎಸ್. ಸುರೇಶ್‌ಕುಮಾರ್ ಮಾತನಾಡಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಮ್ಮ ಪಕ್ಷದ ಅಭ್ಯರ್ಥಿ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಕೋಟಾ ಅವರಿಗೆ ಹಿಂದಿ, ಇಂಗ್ಲಿಷ್ ಭಾಷೆ ಬರಲ್ಲ, ಓಟ್ ಹಾಕಬೇಡಿ ಅಂದಿದ್ದಾರೆ. ಈ ಹೇಳಿಕೆಯನ್ನು ಆಯೋಗ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ಜಯಪ್ರಕಾಶ್ ಹೆಗಡೆ ಅವರು ಆ ರೀತಿಯ ಹೇಳಿಕೆ ನೀಡಿ, ಜನರಿಗೆ ಅವರ ಮೇಲಿದ್ದ ಗೌರವ ಅವರೇ ಕಡಿಮೆ ಮಾಡಿಕೊಂಡಿದ್ದಾರೆ'' ಎಂದರು.