ನವದೆಹಲಿ: ಬಿಜೆಪಿ ತನ್ನ ಹಣಬಲದಿಂದ ನಮ್ಮ ಕುಟುಂಬ ಮತ್ತು ಪಕ್ಷವನ್ನು ಒಡೆಯಲು ಸಂಚು ರೂಪಿಸುತ್ತಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಆರೋಪಿಸಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ದ ಹಿರಿಯ ಮುಖಂಡ ಚಂಪೈ ಸೊರೆನ್ ಭಾರತೀಯ ಜನತಾ ಪಕ್ಷ ಸೇರಲಿದ್ದಾರೆ ಎಂಬ ವದಂತಿಗಳ ಮಧ್ಯೆ ಭಾನುವಾರ ಅವರು ದೆಹಲಿಗೆ ಬಂದಿಳಿದ ನಂತರ ಹೇಮಂತ್ ಸೊರೆನ್ ಈ ಆರೋಪ ಮಾಡಿರುವುದು ಗಮನಾರ್ಹ.
ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಇತರ ನಾಲ್ವರು ಜೆಎಂಎಂ ನಾಯಕರೊಂದಿಗೆ ಹಠಾತ್ ದೆಹಲಿಗೆ ಭೇಟಿ ನೀಡಿದ್ದಾರೆ. ಇದರಿಂದಾಗಿ ಹೇಮಂತ್ ಸೊರೆನ್ ನೇತೃತ್ವದ ಜೆಎಂಎಂ ಪಕ್ಷದಿಂದ ಚಂಪೈ ಸೊರೆನ್ ಹೊರನಡೆಯಲಿದ್ದಾರೆ ಎಂಬ ವದಂತಿಗಳಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ. ಆದರೆ ತಾವಯ ವೈಯಕ್ತಿಕ ಕೆಲಸಗಳಿಗಾಗಿ ದೆಹಲಿಗೆ ಬಂದಿರುವುದಾಗಿ ಚಂಪೈ ಸೊರೆನ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಏತನ್ಮಧ್ಯೆ, ಗೊಡ್ಡಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಹೇಮಂತ್ ಸೊರೆನ್, ಬಿಜೆಪಿಯು ಜೆಎಂಎಂನ ಕೆಲ ನಾಯಕರಿಗೆ ಹಣದ ಆಮಿಷ ಒಡ್ಡುತ್ತಿದ್ದು, ಸಾಮಾಜಿಕ ಮತ್ತು ರಾಜಕೀಯ ತಂತ್ರಗಳ ಮೂಲಕ ಅವರು ಪಕ್ಷದಿಂದ ಹೊರಹೋಗುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.
"ನಮ್ಮ ಶಾಸಕರನ್ನು ಖರೀದಿಸಲು ಪ್ರಯತ್ನಿಸುವ ಮೂಲಕ ಮತ್ತು ಸಮಾಜ ಮತ್ತು ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯವನ್ನು ಸೃಷ್ಟಿಸುವ ಮೂಲಕ ನಮ್ಮ ಸರ್ಕಾರವನ್ನು ದುರ್ಬಲಗೊಳಿಸುವ ಉದ್ದೇಶಪೂರ್ವಕ ಯೋಜನೆಯಲ್ಲಿ ಬಿಜೆಪಿ ಭಾಗಿಯಾಗಿದೆ" ಎಂದು ಸಿಎಂ ಸೊರೆನ್ ಹೇಳಿದರು.