ಪಾಟ್ನಾ:ನೇಪಾಳದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಉತ್ತರ ಬಿಹಾರದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಗಂಡಕ್, ಕೋಸಿ (ಭೀಮ್ ನಗರ) ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡಿರುವುದರಿಂದ ಅನೇಕ ಹಳ್ಳಿಗಳು ದ್ವೀಪಗಳಾಗಿ ಮಾರ್ಪಟ್ಟಿವೆ. ಹರ್ಬೋಡಾ ಎಂಬ ನದಿಯ ಉಕ್ಕಿ ಹರಿಯುತ್ತಿದ್ದು, ನೀರು ಮಾಧೋಪುರ್ ಮತ್ತು ಗುವಾನಾಹ ಪಂಚಾಯಿತಿಯ 12ಕ್ಕೂ ಹೆಚ್ಚು ಹಳ್ಳಿಗಳಿಗೆ ನುಗ್ಗಿ ಸಾಕಷ್ಟು ಹಾನಿ ಉಂಟು ಮಾಡಿದೆ. ಕನಕೈ, ಮಹಾನಂದ, ಪರ್ಮಾನ್ ಮತ್ತು ದಾಸ್ ನದಿಗಳು ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸ್ಥಳೀಯರು ತಮ್ಮ ಮಕ್ಕಳೊಂದಿಗೆ ದೋಣಿಗಳಲ್ಲಿ ಗ್ರಾಮವವನ್ನು ತೊರೆಯುತ್ತಿದ್ದಾರೆ.
ಹಲವು ಗ್ರಾಮಗಳ ಮುಳುಗಡೆ:ಕಂಕೈ ನದಿಯ ಪ್ರವಾಹದಿಂದ ನಾಗರ ತೋಳಿ, ಸಿಮಲಬಾಡಿ ಸೇರಿದಂತೆ ಕಲವು ಗ್ರಾಮಗಳು ನೀರಿನಿಂದ ಆವೃತಗೊಂಡಿದ್ದು, ಹತ್ತಾರು ಕುಟುಂಬಗಳ ಮನೆಗಳು ನದಿಯಲ್ಲಿ ಮುಳುಗಿವೆ. ನೂರಾರು ಕುಟುಂಬಗಳು, ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದು, ಪೈಥಾನ್ ಟೋಲಿಯಲ್ಲಿರುವ ಎತ್ತರದ ಸೇತುವೆಯ ಮೇಲೆ ಬಯಲಿನಲ್ಲಿ ಆಶ್ರಯ ಪಡೆದಿದ್ದಾರೆ. ರಾಜ್ಯ ಹೆದ್ದಾರಿ 99ರಲ್ಲಿ ಹಲಾಲ್‌ಪುರ ಚೌಕ್‌ನಿಂದ ಪೈಠಾಣ್ ಟೋಲಿವರೆಗಿನ ಪ್ರಧಾನ ಮಂತ್ರಿ ರಸ್ತೆ ಹಲವೆಡೆ ಹಾಳಾಗಿದೆ. ರಸ್ತೆಯಲ್ಲಿ ಎರಡು ಅಡಿ ಎತ್ತರದಲ್ಲಿ ನೀರು ಹರಿಯುತ್ತಿರುವುದರಿಂದ ಸಂಚಾರ ಬಂದ್ ಆಗಿದೆ. ಮತ್ತೊಂದೆಡೆ ಪೈಠಾಣ್ ಟೋಳಿಯಿಂದ ಸಿಮಲವಾಡಕ್ಕೆ ಹೋಗುವ ರಸ್ತೆ ಸಂಪರ್ಕ ಕೂಡ ಕಡಿತಗೊಂಡಿದೆ.
ಶಿವರಾಜಪುರದ ಗ್ರಾಮ ದ್ವೀಪವಾಗಿ ಮಾರ್ಪಟ್ಟಿದೆ. ಗ್ರಾಮದಿಂದ ಹೊರಬರಲು ದಾರಿಯೇ ಇಲ್ಲ. ಜಿಲ್ಲಾಡಳಿತದಿಂದ ದೋಣಿ ವ್ಯವಸ್ಥೆ ಕೂಡ ಮಾಡಿಲ್ಲ. ಗ್ರಾಮಸ್ಥರು ಗ್ರಾಮದಲ್ಲಿಯೇ ಪರದಾಡುವಂತಾಗಿದೆ. ಪಂಚಾಯಿತಿ ಅರ್ಧದಷ್ಟು ಜನಸಂಖ್ಯೆಯು ಪ್ರವಾಹದಲ್ಲಿ ಸಿಲುಕಿಕೊಂಡಿದೆ. ಆದರೆ, ಇದುವರೆಗೆ ನಮ್ಮ ಬಳಿ ಯಾವ ಅಧಿಕಾರಿಗಳು ಬಂದಿಲ್ಲ. ಚುನಾವಣೆಯ ಸಮಯದಲ್ಲಿ, ಮತ ಕೇಳಬೇಕಾದಾಗ, ನಾವು ಚಿಕ್ಕಪ್ಪ, ದೊಡ್ಡಪ್ಪ, ಅಣ್ಣ, ಅತ್ತಿಗೆಯಾಗುತ್ತೇವೆ. ನಾವು ನಿಮ್ಮ ಮನೆಯ ಮಗ, ಸಹೋದರ-ಸಹೋದರಿ ಅಂತೆಲ್ಲ ಹೇಳಿಕೊಂಡು ಮತ ಪಡೆಯುತ್ತಾರೆ. ಆದರೆ, ಇಂತಹ ಸಮಯದಲ್ಲಿ ಯಾರೂ ನಮ್ಮನ್ನು ನೆನಪಿಸಿಕೊಳ್ಳುತ್ತಿಲ್ಲ ಎಂದು ಜನಪ್ರತಿನಿಧಿಗಳ ವಿರುದ್ಧ ಸಂತ್ರಸ್ತರು ಕಿಡಿ ಕಾರುತ್ತಿದ್ದಾರೆ.