ಪಾಟ್ನಾ : 34 ವರ್ಷದ ಹಿಂದಿನ ಪ್ರಕರಣದಲ್ಲಿ 20 ರೂ ಲಂಚ ಪಡೆದ ಪೊಲೀಸ್ ಕಾನ್ಸ್ಟೇಬಲ್ ಬಂಧಿಸುವಂತೆ ಬಿಹಾರ ಕೋರ್ಟ್ ಆದೇಶಿಸಿದೆ. ಸಹರ್ಸ ಜಿಲ್ಲೆಯಲ್ಲಿ 34 ವರ್ಷದ ಹಿಂದೆ ಕಾನ್ಸ್ಟೇಬಲ್ ಮೇಲೆ ಲಂಚ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸಹರ್ಸದ ವಿಶೇಷ ನಿರ್ವಹಣಾ ನ್ಯಾಯಾಲಯ 20 ರೂ ಲಂಚ ಪಡೆದ ಆರೋಪದ ಮೇಲೆ ಬಂಧಿಸುವಂತೆ ಆದೇಶಿಸಿದೆ.
ಏನಿದು ಪ್ರಕರಣ?: 1990ರ ಮೇ 6ರಂದು ಹವಿಲ್ದಾರ್ ಸುರೇಶ್ ಪ್ರಸಾದ್ ಸಹರ್ಸ ರೈಲ್ವೆ ನಿಲ್ದಾಣದಲ್ಲಿ ತರಕಾರಿ ಮಾರುತ್ತಿದ್ದ ಮಹಿಳೆ ಬಳಿ 20 ರೂ ಲಂಚ ಪಡೆದಿದ್ದರು. ಈ ವೇಳೆ, ಪೊಲೀಸ್ ಯೂನಿಫಾರ್ಮ್ನಲ್ಲಿ ಕೆಲಸ ನಿರ್ವಹಿಸುವಾಗಲೇ 20 ರೂ ಹಣ ಪಡೆದ ಹಿನ್ನೆಲೆ ಸಹರ್ಸ ರೈಲ್ವೆ ನಿಲ್ದಾಣದ ಅಧಿಕಾರಿಗಳ ಜೊತೆಗಿನ ಪೊಲೀಸ್ ತಂಡ ಅವರನ್ನು ವಶಕ್ಕೆ ಪಡೆದಿತ್ತು.
ಈ ವೇಳೆ ಹವಿಲ್ದಾರ್ ಅವರನ್ನು ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಸುರೇಶ್ ತಾವು ಸಹರ್ಸನಲ್ಲಿ ಮಹೇಶ್ಕುಂತ್ನಲ್ಲಿನ ವಿಳಾಸ ನೀಡಿದ್ದರು. ಆದರೆ, ಅವರು ಲಖಿಸರೈ ಜಿಲ್ಲೆಯ ಬಿಜೋಯ್ ಗ್ರಾಮದಲ್ಲಿ ನೆಲೆಸಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ, ಸುರೇಶ್ ಕೋರ್ಟ್ಗೆ ಹಾಜರಾಗಿರಲಿಲ್ಲ, ಅಲ್ಲದೇ ತಪ್ಪಾದ ವಿಳಾಸದ ಹಿನ್ನೆಲೆ ಆತನ ಪತ್ತೆ ಕೂಡ ಸಾಧ್ಯವಾಗಿರಲಿಲ್ಲ.