ಹೈದರಾಬಾದ್/ ನವದೆಹಲಿ: ರಾಜಕೀಯ ಪಕ್ಷಗಳು ಮಹಿಳೆಯರಿಗಾಗಿ ರೂಪಿಸಿರುವ 'ನಗದು ವರ್ಗಾವಣೆ' ಯೋಜನೆಗಳು ಆಯಾ ರಾಜ್ಯಗಳ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರುತ್ತಿವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವರದಿ ಹೇಳಿದೆ.
ಕರ್ನಾಟಕ, ಒಡಿಶಾ, ಪಶ್ಚಿಮಬಂಗಾಳ, ತೆಲಂಗಾಣ, ದೆಹಲಿ ಸೇರಿದಂತೆ ಹಲವು ರಾಜ್ಯಗಳು ಮಹಿಳಾ ಅಭಿವೃದ್ಧಿ ಹೆಸರಿನಲ್ಲಿ ಆರ್ಥಿಕ ನೆರವು ನೀಡುವ ಭಾಗವಾಗಿ ಮಾಸಿಕ ಇಂತಿಷ್ಟು ನಗದು ನೀಡುವ ಯೋಜನೆಗಳನ್ನು ರೂಪಿಸಿವೆ. ಇದು ರಾಜ್ಯದ ಆರ್ಥಿಕತೆಗೆ ಹೊರೆಯಾಗಿದೆ ಎಂದು ಬ್ಯಾಂಕ್ ನಡೆಸಿದ ಅಧ್ಯಯನ ವರದಿಯು ಉಲ್ಲೇಖಿಸಿದೆ.
ಕೆಲವು ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮತಗಳನ್ನು ಗಳಿಸುವ ಮತ್ತು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಇಂತಹ ಯೋಜನೆಗಳನ್ನು ಘೋಷಿಸುತ್ತಿವೆ. ನಗದು ವರ್ಗಾವಣೆ ಯೋಜನೆಗಳ ಸುನಾಮಿಯಿಂದ ಆಯಾ ರಾಜ್ಯಗಳ ಆರ್ಥಿಕತೆಗೆ ಪೆಟ್ಟು ಬಿದ್ದಿದೆ ಎಂದು ಎಸ್‌ಬಿಐ ಎಚ್ಚರಿಸಿದೆ.
ದೇಶದ 8 ರಾಜ್ಯಗಳಲ್ಲಿ ಜಾರಿಯಾಗಿರುವ ಇಂತಹ ಯೋಜನೆಗಳಿಂದ ಅದರ ಒಟ್ಟು ಮೊತ್ತ 1.5 ಲಕ್ಷ ಕೋಟಿ ರೂಪಾಯಿ ದಾಟಿದೆ. ಈ ಯೋಜನೆಯಿಂದ ಖರ್ಚಾಗುವ ಹಣವು ಆಯಾ ರಾಜ್ಯಗಳು ಗಳಿಸುವ ವಾರ್ಷಿಕ ಆದಾಯದ ಸರಿಸುಮಾರು ಶೇಕಡಾ 3 ರಿಂದ 11 ರಷ್ಟಿದೆ. ಇದರಿಂದ ಹಲವು ರಾಜ್ಯಗಳು ಸಾಲದ ಮೊರೆ ಹೋಗುತ್ತಿವೆ ಎಂದು ವರದಿ ತಿಳಿಸಿದೆ.
ಉಳಿದ ರಾಜ್ಯಗಳಿಗಿಂತ ಒಡಿಶಾ ಬೆಸ್ಟ್: ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಒಡಿಶಾ ಈ ಯೋಜನೆಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸುತ್ತಿದೆ ಎಂದು ಎಸ್‌ಬಿಐ ಹೇಳಿದೆ. ಈ ಯೋಜನೆಗೆ ತಗುಲುವ ವೆಚ್ಚವನ್ನು ಅಲ್ಲಿನ ಸರ್ಕಾರವು ತೆರಿಗೆಯೇತರ ಆದಾಯದಿಂದ ಸರಿದೂಗಿಸಿಕೊಂಡಿದೆ. ಇದರಿಂದ ಅದು ಹೊಸ ಸಾಲ ಪಡೆಯುತ್ತಿಲ್ಲ ಎಂದು ವರದಿಯಲ್ಲಿ ಪ್ರಸ್ತಾಪಿಸಿದೆ.
ಯಾವ ರಾಜ್ಯದಲ್ಲಿ ಎಷ್ಟು ಖರ್ಚು?
- ಕರ್ನಾಟಕದಲ್ಲಿ 'ಗೃಹಲಕ್ಷ್ಮಿ ಯೋಜನೆ'ಗೆ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ 2 ಸಾವಿರ ರೂಪಾಯಿ ನೀಡಲಾಗುತ್ತಿದೆ. ಇದಕ್ಕಾಗಿ ಒಂದು ವರ್ಷಕ್ಕೆ 28,608 ಕೋಟಿ ರೂಪಾಯಿ ವ್ಯಯವಾಗುತ್ತಿದೆ. ಇದು ರಾಜ್ಯದ ಆದಾಯದ ಶೇ.11 ರಷ್ಟಿದೆ.
- ಪಶ್ಚಿಮ ಬಂಗಾಳದಲ್ಲಿ ಮಹಿಳೆಯರಿಗೆ 'ಲಕ್ಷ್ಮಿ ಭಂಡಾರ್ ಯೋಜನೆ'ಯ ಮೂಲಕ ಮಾಸಿಕ 1 ಸಾವಿರ ರೂಪಾಯಿ ನೀಡಲಾಗುತ್ತದೆ. ಇದಕ್ಕಾಗಿ ವಾರ್ಷಿಕ 14,400 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಇದು ರಾಜ್ಯದ ಆದಾಯದ ಶೇಕಡಾ 6 ರಷ್ಟಿದೆ.
- ದೆಹಲಿಯ ಎಎಪಿ ಸರ್ಕಾರವು 'ಮಹಿಳಾ ಸಮ್ಮಾನ್ ಯೋಜನೆ' ಮೂಲಕ ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಇದಕ್ಕಾಗಿ 2 ಸಾವಿರ ಕೋಟಿ ಖರ್ಚಾಗಲಿದೆ. ಇದು ದೆಹಲಿಯ ವಾರ್ಷಿಕ ಆದಾಯದ 3 ಪ್ರತಿಶತಕ್ಕೆ ಸಮಾನವಾಗಿದೆ.
ಕೇಂದ್ರ-ರಾಜ್ಯಗಳ ಜಂಟಿ ಯೋಜನೆ: ವಿವಿಧ ರಾಜ್ಯಗಳಲ್ಲಿ ಮಹಿಳೆಯರಿಗೆ ರೂಪಿಸಿರುವ ಇಂತಹ ಯೋಜನೆಗಳ ಜನಪ್ರಿಯತೆಯಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಿದೆ. ಮಹಿಳೆಯರಿಗಾಗಿ ಇಂತಹ ನಗದು ವರ್ಗಾವಣೆ ಯೋಜನೆ ಪ್ರಾರಂಭಿಸುವ ಬಗ್ಗೆ ಕೇಂದ್ರ ಸರ್ಕಾರವೂ ಚಿಂತಿಸಿದೆ ಎಂದು ಎಸ್‌ಬಿಐ ವರದಿ ತಿಳಿಸಿದೆ.
ಕೇಂದ್ರ ಮತ್ತು ರಾಜ್ಯಗಳು ಪ್ರತ್ಯೇಕವಾಗಿ ಹಣ ನೀಡುವ ಬದಲು, ರಾಷ್ಟ್ರೀಯ ಮಟ್ಟದಲ್ಲಿ 'ಸಾರ್ವತ್ರಿಕ ನಗದು ವರ್ಗಾವಣೆ ಯೋಜನೆ'ಯನ್ನು ಜಾರಿಗೆ ತರುವುದು ಉತ್ತಮ ಎಂದು ಎಸ್‌ಬಿಐ ಅಭಿಪ್ರಾಯಪಟ್ಟಿದೆ. ಇದಕ್ಕಾಗಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಸಮಾನವಾಗಿ ಅನುದಾನ ನೀಡಿದಲ್ಲಿ, ರಾಜ್ಯಗಳು ಸಾಲದ ಸುಳಿಗೆ ಸಿಲುಕುವುದು ತಪ್ಪುತ್ತದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ಓದಿ: ಗೃಹಲಕ್ಷ್ಮಿ ಹಣ ಸದುಪಯೋಗ : ಹಾವೇರಿಯಲ್ಲಿ ರೋಟವೇಟರ್ ಖರೀದಿಸಿದ ಅತ್ತೆ-ಸೊಸೆ
ಓದಿ: ಪುತ್ತೂರು : 'ಗೃಹಲಕ್ಷ್ಮಿ' ಹಣದಿಂದ ಪತಿಗೆ ಸ್ಕೂಟರ್ ಕೊಡಿಸಿದ ಪತ್ನಿ