ಚಿಕ್ಕೋಡಿ (ಬೆಳಗಾವಿ) : ಬಿ ಶ್ರೀರಾಮುಲು ಕಾಂಗ್ರೆಸ್ ಸೇರುವ ಕುರಿತು ನನಗೆ ಯಾವುದೇ ರೀತಿಯ ಮಾಹಿತಿ ಇಲ್ಲ. ಡಿಸಿಎಂ ಡಿ. ಕೆ ಶಿವಕುಮಾರ್ ಶ್ರೀರಾಮುಲು ಕರೆತರುವ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ನಾನು, ರಾಜಣ್ಣ ಸೇರಿದಂತೆ ಎಲ್ಲರೂ ಹೇಳಿದ್ದೇವೆ. ಮೊದಲಿನಿಂದಲೂ ಹೇಳುತ್ತಲೇ ಇದ್ದೇವೆ. ಶ್ರೀರಾಮುಲು ಆದಿಯಾಗಿ ನಮ್ಮ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತಿಸುತ್ತೇವೆ. ಇದೇ ಮಾತನ್ನು ಈಗಲೂ ಹಾಗೆ ನಾಳೆಯೂ ಹೇಳುತ್ತೇವೆ ಎಂದರು.
ನೋಟಿಸ್ ಕೊಡ್ತಾರೆ : ರಾಮುಲು ಕಾಂಗ್ರೆಸ್ ಸೇರುವುದಕ್ಕೆ ನಾನು ವಿರೋಧಿಸಿಲ್ಲ. ಈ ಕುರಿತು ನಾನು ಯಾವುದೇ ಹೇಳಿಕೆ ನೀಡಿಲ್ಲ. ನಾನು ಯಾವುದೇ ಹೇಳಿಕೆ ನೀಡಿದರೂ ಸಹ ಹೈಕಮಾಂಡ್ನವರು ನೋಟಿಸ್ ನೀಡುತ್ತಾರೆ. ಇವೆಲ್ಲ ಊಹಾಪೋಹಗಳು. ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಾವು ಕರೆದರೆ ಯಾರೂ ಪಕ್ಷಕ್ಕೆ ಬರುವುದಿಲ್ಲ. ಬರುವವರು ಅವರಾಗಿಯೇ ಸ್ವಇಚ್ಛೆಯಿಂದ ಬರುತ್ತಾರೆ ಎಂದು ಹೇಳಿದರು.
ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ: 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವುದು ಎಲ್ಲರ ಜವಾಬ್ದಾರಿ. ಅದರಂತೆಯೇ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಆಸಕ್ತಿ ತೋರಿಸುವುದೂ ಕೂಡ ಎಲ್ಲರ ಹಕ್ಕಾಗಿದೆ. ಸಿಎಂ ಹುದ್ದೆಯ ವಿಚಾರದಲ್ಲಿ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ಸಿಎಂ ಆಗುತ್ತೇನೆ ಎಂದು ಹೇಳಿಲ್ಲ. ಬದಲಿಗೆ ಎಲ್ಲರೊಂದಿಗೆ ಹಕ್ಕು ಮಂಡಿಸುತ್ತೇನೆ ಎಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಮಾಡೋದು ಅಥವಾ ಬಿಡೋದು ಅದು ಹೈಕಮಾಂಡ್ಗೆ ಬಿಟ್ಟ ವಿಚಾರ. ಸರ್ಕಾರವನ್ನು ತರುವಲ್ಲಿ ಎಲ್ಲರ ಪಾತ್ರ ಇದ್ದೇ ಇರುತ್ತದೆ. ಅದರಲ್ಲಿ ನಾನೂ ಕೂಡ ಒಬ್ಬ ಭಾಗಿದಾರನಾಗಿದ್ದೇನೆ ಎಂದು ಹೇಳಿದರು.
ಡಿಕೆಶಿ ನಾನು ಒಗ್ಗಟ್ಟಿನಿಂದ ಇದ್ದೇವೆ : ಡಿ.ಕೆ ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ. ಮೊನ್ನೆ ತಾನೇ ಗಾಂಧಿ ಭಾರತ ಕಾರ್ಯಕ್ರಮ ಜೊತೆಯಾಗಿಯೇ ಯಶಸ್ವಿ ಮಾಡಿದ್ದೇವೆ. ನಾವೆಲ್ಲ ಒಗ್ಗಟ್ಟಾಗಿ ಒಂದೇ ಕಡೆ ಇದ್ದೇವೆ. ಇದರಲ್ಲಿ ಯಾವುದೇ ವೈಮನಸ್ಸಿನ ಪ್ರಶ್ನೆಯೇ ಬರುವುದಿಲ್ಲ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಗ್ಗೆ ಹೇಳಿಕೆ ನೀಡಲು ನಾನು ಸೂಕ್ತ ವ್ಯಕ್ತಿಯಲ್ಲ. ನಮ್ಮ ಕಡೆ ಆ ಅಧಿಕಾರನೂ ಇಲ್ಲ. ಅದು ದೆಹಲಿ ನಾಯಕರಿಗೆ ಗೊತ್ತಿರುವ ವಿಚಾರ ಎಂದು ಹೇಳಿದರು.