ಜಮ್ಮು, (ಜೆ &ಕೆ): ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಕತ್ರಾ ನಗರದಿಂದ ಶ್ರೀನಗರಕ್ಕೆ ಮೊದಲ ಬಾರಿಗೆ ವಂದೇ ಭಾರತ್ ರೈಲು ಯಶಸ್ವಿ ಪ್ರಾಯೋಗಿಕ ಸಂಚಾರ ನಡೆಸಿತು. ತನ್ನ ಐಷರಾಮಿ ವೇಗದಿಂದ ಹೆಸರು ವಾಸಿಯಾಗಿರುವ ವಂದೇ ಭಾರತ್ ರೈಲು ಕತ್ರಾ ರೈಲು ನಿಲ್ದಾಣದಿಂದ ಬೆಳಗ್ಗೆ 8ಕ್ಕೆ ಹೊರಟು 11ಗಂಟೆ ಹೊತ್ತಿಗೆ ಶ್ರೀನಗರ ರೈಲು ನಿಲ್ದಾಣಕ್ಕೆ ಬಂದು ತಲುಪಿತು. 150 ಕಿ,ಮೀ ಉದ್ದದ ಮಾರ್ಗವನ್ನು ಒಂದೂವರೆ ಗಂಟೆಯಲ್ಲಿ ಕ್ರಮಿಸಿತು.
ಸಾಮಾನ್ಯವಾಗಿ ಜಮ್ಮು ಮತ್ತು ಕಾಶ್ಮೀರದ ಪ್ರಯಾಣವೂ ಇಲ್ಲಿನ ಅರಣ್ಯದ ಮಾರ್ಗ, ತಿರುವುಗಳಿಂದಾಗಿ ಸುಮಾರು 6 ರಿಂದ 8 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ, ಇದೀಗ ಈ ಪ್ರಯಾಣ ಕಡಿಮೆ ಸಮಯದಲ್ಲಿ ಮುಗಿಯಲಿದೆ. ಇನ್ನು ಈ ರೈಲು ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆ ದಾಟಿದ್ದು ವಿಶೇಷವಾಗಿದೆ.
ಹವಾಮಾನಕ್ಕೆ ಹೊಂದಿಕೊಳ್ಳುವಂಥ ವ್ಯವಸ್ಥೆ: ಭಾರತದ ಮೊದಲ ಕೇಬಲ್ ಶೈಲಿಯ ರೈಲ್ವೆ ಸೇತುವೆಯಾದ ಅಂಜಿ ಖಡ್ ಸೇತುವೆಯನ್ನು ಕೂಡ ದಾಟಿ ಈ ರೈಲು ಪ್ರಯಾಣ ಬೆಳೆಸಿ ಗಮನ ಸೆಳೆಯಿತು. ಇಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳುವಂತೆ ಈ ರೈಲಿನ ವಿನ್ಯಾಸಗೊಳಿಸಿದ್ದು, ಚಳಿಗಾಲದಲ್ಲಿ ಕಣಿವೆ ರಾಜ್ಯದಲ್ಲಿನ ತಾಪಮಾನವನ್ನು ಗಮನದಲ್ಲಿರಿಸಿಕೊಂಡು ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ಈ ರೈಲು ಕನಿಷ್ಠ ತಾಪಮಾನ ಅಂದರೆ -30 ಡಿಗ್ರಿ ಸೆಲ್ಸಿಯಸ್ನಲ್ಲೂ ಕೂಡ ಕಾರ್ಯಾಚರಣೆ ನಡೆಸಲಿದ್ದು, ರೈಲಿನೊಳಗಿರುವ ಆಸನಗಳು ಸುಧಾರಿತ ಶಾಖದ ವ್ಯವಸ್ಥೆ ಹೊಂದಿದ್ದು, ಇದು ರೈಲಿನಲ್ಲಿರುವ ಜೈವಿಕ ಶೌಚಾಲಯ ಟ್ಯಾಂಕ್ ನೀರು ಹೆಪ್ಪುಗಟ್ಟುವುದನ್ನು ತಡೆಯುತ್ತದೆ.
ದೆಹಲಿ ಚುನಾವಣೆ ಬಳಿಕ ಪ್ರಧಾನಿಗಳಿಂದ ಚಾಲನೆ: ದೆಹಲಿ ವಿಧಾನಸಭೆ ಚುನಾವಣೆಯಾದ ಬಳಿಕ ಕತ್ರಾದಿಂದ ಶ್ರೀನಗರದ ನಡುವೆ ಈ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ಸಾಧ್ಯತೆ ಇದೆ. ಈಟಿವಿ ಭಾರತ್ನೊಂದಿಗೆ ಮಾತನಾಡಿದ ಶ್ರೀನಗರ ಭಾರತೀಯ ರೈಲ್ವೆ ಪ್ರದೇಶದ ಮ್ಯಾನೇಜರ್ ಸದೀಕ್ ಯೂಸಫ್, ಪ್ರಯೋಗವೂ ರೈಲು ಕಾರ್ಯಾಚರಣೆ ಮತ್ತುಷ್ಟು ಹತ್ತಿರಕ್ಕೆ ತಂದಿದೆ. ವಂದೇ ಭಾರತ್ ರೈಲನ್ನು ಹವಾಮಾನಕ್ಕೆ ಹೊಂದಿಕೊಳ್ಳುವಂತೆ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ.
ರೈಲಿನ ವಿಂಡ್ಶೀಲ್ಡ್ ಅನ್ನು ಕೂಡಾ ಹಿಮ- ವಿರೋಧಿ ತಂತ್ರಜ್ಞಾನದ ಮೂಲಕ ನಿರ್ಮಿಸಲಾಗಿದೆ. ಈ ರೈಲು ಜನವರಿ 24ರಂದು ನವದೆಹಲಿಯಿಂದ ಹೊರಟು ಜಮ್ಮುವಿನ ತವಿ ರೈಲು ನಿಲ್ದಾಣಕ್ಕೆ ಬಂದಿಳಿಯಿತು. ಬಳಿಕ ರಾತ್ರಿ ಕತ್ರಾ ನಿಲ್ದಾಣದಲ್ಲೇ ಇದ್ದು, ಇಂದು ಬೆಳಗ್ಗೆ ಕಣಿವೆ ರಾಜ್ಯದಲ್ಲಿ ಗಿರಿ ಶಿಖರದ ನಡುವೆ ಪ್ರಯಾಣಿಸಿತು ಎಂದರು.
ವಂದೇ ಭಾರತ್ ರೈಲು ವೇಗಕ್ಕೆ ಹೆಸರಾಗಿದ್ದರೂ, ಕಾಶ್ಮೀರದಲ್ಲಿ ಗಂಟೆಗೆ 160 ಕಿ.ಮೀ ವೇಗಕ್ಕಿಂತ ಹೆಚ್ಚಾಗಿ ಸಂಚರಿಸಲು ಸಾಧ್ಯವಿಲ್ಲ. ರೈಲ್ವೆ ಆಯುಕ್ತರು ಸುರಕ್ಷತೆಯ ದೃಷ್ಟಿಯಿಂದ ಇದರ ವೇಗವನ್ನು ಗಂಟೆಗೆ 85ಕಿ.ಮೀ ನಿಗದಿ ಮಾಡಿದ್ದಾರೆ . ಸಂಚಾರ ಕಾರ್ಯಾಚರಣೆ ಬಳಿಕ ಹಳಿಗಳು ಸುಸ್ಥಿರಗೊಂಡ ನಂತರ ಕ್ರಮೇಣವಾಗಿ ಇದರ ವೇಗ ಹೆಚ್ಚಿಸಲಾಗುವುದು ಎಂದು ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಮುನ್ನ ಕಣಿವೆ ರಾಜ್ಯದಲ್ಲಿ ಗುಂಡಿನ ಸದ್ದು; ಸೇನೆ- ಭಯೋತ್ಪಾದಕರ ನಡುವೆ ಎನ್ಕೌಂಟರ್
ಇದನ್ನೂ ಓದಿ: ಭಾರತದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಬಿಕ್ಕಟ್ಟು: ಇಲ್ಲವೇ ಇದಕ್ಕೆ ಪರಿಹಾರ?!