ಗುವಾಹಟಿ (ಅಸ್ಸೋಂ):ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಅಸ್ಸೋಂನಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗುತ್ತಿವೆ. ಯಾತ್ರೆಯ ಗುವಾಹಟಿ ಪ್ರವೇಶಕ್ಕೆ ಅವಕಾಶ ನಿರಾಕರಣೆ ಮಾಡಲಾಗಿದೆ. ಹೀಗಾಗಿ ಇಂದು ಪೊಲೀಸರು ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಘರ್ಷಣೆ ಉಂಟಾಗಿದೆ. ಈ ವೇಳೆ, ಪಕ್ಷದ ಅಸ್ಸೋಂ ರಾಜ್ಯಾಧ್ಯಕ್ಷ ಭೂಪೇನ್ ಕುಮಾರ್ ಬೋರಾ ಮತ್ತು ಮುಖಂಡ ಜಾಕಿರ್ ಹುಸೇನ್ ಸಿಕ್ದರ್ ಸೇರಿದಂತೆ ಇತರರು ಗಾಯಗೊಂಡಿದ್ದಾರೆ. ಮತ್ತೊಂದೆಡೆ, ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಪ್ರಚೋದನೆ ಆರೋಪದಡಿ ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಿಸುವಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೂಚಿಸಿದ್ದಾರೆ.
ಜನವರಿ 14ರಂದು ಮಣಿಪುರದಿಂದ ಮುಂಬೈಗೆ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭವಾಗಿದೆ. ಈಶಾನ್ಯ ರಾಜ್ಯಗಳಾದ ಮಣಿಪುರ, ನಾಗಾಲ್ಯಾಂಡ್, ಅಸ್ಸೋಂ, ಅರುಣಾಚಲ ಪ್ರದೇಶ, ಮೇಘಾಲಯದಲ್ಲಿ ಯಾತ್ರೆ ಸಂಚರಿಸುತ್ತಿದೆ. ಆದರೆ, ಅಸ್ಸೋಂನಲ್ಲಿ ನಿರಂತರವಾಗಿ ಅಹಿತಕರ ಘಟನೆಗಳು ವರದಿಯಾಗುತ್ತಿವೆ. ಭಾನುವಾರ ಸೋನಿತ್‌ಪುರ ಜಿಲ್ಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಭೂಪೇನ್ ಕುಮಾರ್ ಬೋರಾ ಅವರ ಹಲ್ಲೆ ನಡೆಸಲಾಗಿತ್ತು. ಹಿರಿಯ ನಾಯಕ ಜೈರಾಮ್ ರಮೇಶ್ ಅವರ ಕಾರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ, ರಾಹುಲ್ ಗಾಂಧಿ ಸಂಚರಿಸುತ್ತಿದ್ದ ಬಸ್ಗೆ ಅಡ್ಡಿಪಡಿಸುವ ಯತ್ನಗಳು ನಡೆದಿದ್ದವು ಎಂಬ ಆರೋಪವೂ ಇದೆ.
ಗುವಾಹಟಿ ಪ್ರವೇಶಕ್ಕೆ ನಿರಾಕರಣೆ: ಅಲ್ಲದೇ, ಸೋಮವಾರ ಸಮಾಜ ಸುಧಾರಕ - ಸಂತ ಶ್ರೀಮಂತ ಶಂಕರದೇವರ ಜನ್ಮಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲು ಯೋಜಿಸಿದ್ದರು. ಆದರೆ, ಶಂಕರದೇವ ದೇವಾಲಯಕ್ಕೆ ರಾಹುಲ್ ಗಾಂಧಿ ಅನುಮತಿ ನೀಡಿರಲಿಲ್ಲ. ಪಕ್ಷದ ಸ್ಥಳೀಯ ಇಬ್ಬರಿಗೆ ಮಾತ್ರ ದೇಗುಲಕ್ಕೆ ತೆರಳಲು ಅವಕಾಶ ನೀಡಲಾಗಿತ್ತು. ಇಂದು ಬೆಳಗ್ಗೆ ಮೇಘಾಲಯದಿಂದ ಗುವಾಹಟಿ ಕಡೆಗೆ ಯಾತ್ರೆ ಸಾಗುತ್ತಿತ್ತು. ಆದರೆ, ಗುವಾಹಟಿಯೊಳಗೆ ಯಾತ್ರೆ ಪ್ರವೇಶಕ್ಕೆ ಅವಕಾಶ ನಿರಾಕರಣೆ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳ ಬದಲಿಗೆ ರಾಷ್ಟ್ರೀಯ ಹೆದ್ದಾರಿ 27ರ ಮಾರ್ಗದ ಮೂಲಕ ಯಾತ್ರೆ ಸಾಗಲು ಕಾಂಗ್ರೆಸ್ಗೆ ಸರ್ಕಾರ ಸೂಚಿಸಿದೆ.
ಮತ್ತೊಂದೆಡೆ, ಇದಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಆಧಾರ ರಹಿತ ಕಾರಣ ನೀಡಿ ಯಾತ್ರೆ ಸಂಚಾರಕ್ಕೆ ಅನುಮತಿ ನಿರಾಕರಿಸಲಾಗುತ್ತಿದೆ. ಯಾತ್ರೆಗೆ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ಗುವಾಹಟಿ ನಗರದ ಪ್ರವೇಶದ ಮುಖ್ಯ ಸ್ಥಳವಾದ ಖಾನಪಾರಾಕ್ಕೆ ಯಾತ್ರೆ ಆಗಮಿಸಿದೆ. ಆದರೆ, ಅಸ್ಸೋಂ ಪೊಲೀಸರು ಈ ಪ್ರದೇಶದಲ್ಲಿ ಬೆಳಗ್ಗೆಯಿಂದಲೇ ದೊಡ್ಡ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ, ಯಾತ್ರೆ ಪ್ರವೇಶಿಸದಂತೆ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ.
ಆಗ ಕಾಂಗ್ರೆಸ್ ಅನೇಕ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ತಳ್ಳಿ ಪ್ರವೇಶಿಸಲು ಪ್ರಯತ್ನಿದ್ದಾರೆ. ಈ ವೇಳೆ, ಪೊಲೀಸರೊಂದಿಗೆ ತೀವ್ರ ಘರ್ಷಣೆ ನಡೆಸಿದರು. ಪೊಲೀಸರು ಲಾಠಿ ಪ್ರಹಾರ ಸಹ ನಡೆಸಿದ್ದಾರೆ. ಇದರಿಂದ ಹಲವರು ಗಾಯಗೊಂಡಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ರಸ್ತೆಯಲ್ಲಿ ಸೇರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಅಸ್ಸೋಂ ಸರ್ಕಾರ, ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ವಾಗ್ದಾಳಿ ನಡೆಸಿದರು.