ಪಲಾಮು:ಜಾರ್ಖಂಡ್‌ನ ಗರ್ಹ್ವಾದ ಭಾವನಾಥಪುರ ಪ್ರದೇಶದಲ್ಲಿ ಅವಮಾನಕರ ಘಟನೆಯೊಂದು ನಡೆದಿದೆ. ಸಾಲ ಪಾವತಿಸದ ಕಾರಣಕ್ಕಾಗಿ ಮಗುವನ್ನು 14 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಡೀ ಪ್ರಕರಣದಲ್ಲಿ ಕ್ರಮ ಕೈಗೊಂಡಿರುವ ಮೈಕ್ರೋ ಫೈನಾನ್ಸ್ ಕಂಪನಿ, ಆರೋಪಿ ಬ್ಯಾಂಕ್ ಮ್ಯಾನೇಜರ್ನನ್ನು ಅಮಾನತುಗೊಳಿಸಿ ಆದೇಶಿಸಿದೆ. ಅಷ್ಟೇ ಅಲ್ಲ ಇಡೀ ವಿಷಯದ ಬಗ್ಗೆ ಆಂತರಿಕ ತನಿಖೆಯನ್ನೂ ಸಹ ನಡೆಸುತ್ತಿದೆ.
ಕಂಪನಿ ಈ ಘಟನೆ ಬಗ್ಗೆ ಜಾರ್ಖಂಡ್‌ನ ಡಿಜಿಪಿ ಮತ್ತು ಗರ್ವಾ ಎಸ್‌ಪಿ ಅವರಿಗೂ ಪತ್ರ ಬರೆದಿದೆ. ಬ್ಯಾಂಕ್ ಮ್ಯಾನೇಜರ್ ಮಟ್ಟದಲ್ಲಿ ಈ ಘಟನೆ ನಡೆದಿದೆ ಎಂದು ಕಂಪನಿ ಸ್ಪಷ್ಟನೆ ನೀಡಿದೆ. ಏತನ್ಮಧ್ಯೆ CWC ಕೂಡ ಸಂಪೂರ್ಣ ವಿಷಯದ ಬಗ್ಗೆ ಪ್ರತ್ಯೇಕ ತನಿಖೆ ಪ್ರಾರಂಭಿಸಿದೆ. ಆರೋಪಿ ಬ್ಯಾಂಕ್ ಮ್ಯಾನೇಜರ್ ನನ್ನು ಪೊಲೀಸ್ ತಂಡ ವಿಚಾರಣೆಗೆ ಒಳಪಡಿಸಿದೆ.
ವಾಸ್ತವವಾಗಿ, ಗರ್ವಾ ಪ್ರದೇಶದ ಭಾವನಾಥಪುರ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯೊಂದರ ಮ್ಯಾನೇಜರ್ ಮತ್ತು ಇತರ ಉದ್ಯೋಗಿಗಳು ಸಾಲವನ್ನು ಮರುಪಾವತಿಸದೇ ಇರುವುದಕ್ಕೆ ಮಗುವನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಒತ್ತೆಯಾಳಾಗಿ ಮಗುವನ್ನು ಇಟ್ಟುಕೊಂಡ ಸಂದರ್ಭದಲ್ಲಿ ಮಗುವಿನ ಕೈಯಿಂದ ಖಾಲಿ ಪಾತ್ರೆಗಳು ಮತ್ತು ಮದ್ಯದ ಬಾಟಲಿಗಳನ್ನು ಎತ್ತುವಂತೆ ಮಾಡಲಾಗಿತ್ತು. ಇದಷ್ಟೇ ಅಲ್ಲ ಮಗುವಿನ ಕಣ್ಣು ಹಾಗೂ ಕಿಡ್ನಿ ಮಾರಾಟ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ. ಈ ಸಂಬಂಧ ದೂರು ಸ್ವೀಕರಿಸಿದ ಪೊಲೀಸರು ಆರೋಪಿ ಬ್ಯಾಂಕ್ ಮ್ಯಾನೇಜರ್ ನನ್ನು ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ತಲೆ ತಗ್ಗಿಸುವಂತಹ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗರ್ವಾ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ತನಿಖೆಯ ಜವಾಬ್ದಾರಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ವಹಿಸಲಾಗಿದೆ. ಇಡೀ ಪ್ರಕರಣದಲ್ಲಿ ಕ್ರಮ ಕೈಗೊಂಡಿರುವ ಕಂಪನಿಯು ಆರೋಪಿ ಬ್ಯಾಂಕ್ ಮ್ಯಾನೇಜರ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಅಲ್ಲದೇ ಮ್ಯಾನೇಜರ್ ವಿರುದ್ಧ ಆಂತರಿಕ ವಿಚಾರಣೆ ಸಹ ಪ್ರಾರಂಭಿಸಲಾಗಿದೆ. ಇಲ್ಲಿ ಯಾವುದೇ ವಿಷಯ ನಡೆದರೂ ಅದು ಬ್ಯಾಂಕ್ ಮ್ಯಾನೇಜರ್ ಅವರ ವೈಯಕ್ತಿಕ ಮಟ್ಟದಲ್ಲಿ ನಡೆದಿದೆ ಎಂದು ಕಂಪನಿಯ ಕಾನೂನು ತಂಡವು ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ ಈ ಸಂಬಂಧ ಆಂತರಿಕೆ ತನಿಖೆಗೂ ಆದೇಶಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ನಿಟ್ಟಿನಿಂದ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದೆ.