ರಾಂಚಿ(ಜಾರ್ಖಂಡ್): ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಅವರ ಬಗ್ಗೆ ಖಚಿತ ಮಾಹಿತಿ ನೀಡಿದವರಿಗೆ ಹಾಗೂ ಅವರನ್ನು ಹುಡುಕಿ ಹಿಡಿದು ಕರೆತಂದವರಿಗೆ ಬಹುಮಾನ ರೂಪದಲ್ಲಿ 11,000 ರೂಪಾಯಿ ನೀಡಲಾಗುವುದು ಎಂದು ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಭರತ ಪೋಸ್ಟ್ ಹಾಕಿದ್ದಾರೆ. ಸಿಎಂ ವಿರುದ್ಧ ವಾಗ್ದಾಳಿ ನಡೆಸಿರುವ ಬಾಬುಲಾಲ್, ಸಿಎಂ ಹಠಾತ್ ನಾಪತ್ತೆಯಿಂದಾಗಿ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟಿನಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜರಿದಿದ್ದಾರೆ.
"ಇಡಿ ದಾಳಿಯಿಂದ ಜಾರ್ಖಂಡ್ ಮುಖ್ಯಮಂತ್ರಿ ಪಲಾಯನ ಮಾಡಿದ್ದಾರೆ. ಯಾರಾದರೂ ಅವರನ್ನು ಹುಡುಕಿ ಕರೆತಂದರೆ ನಾವು ಅವರಿಗೆ 11 ಸಾವಿರ ರೂ. ಬಹುಮಾನ ನೀಡುತ್ತೇವೆ. ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಇಡಿ ಸಮನ್ಸ್ ನೀಡಿದೆ. ವಿಚಾರಣೆಗೆ ಸಹಕರಿಸದೇ ಮನೆಯಿಂದ ಕಾಣೆಯಾಗಿದ್ದಾರೆ. ಮಧ್ಯರಾತ್ರಿ ಕಳ್ಳಬಾಗಿಲಿನಿಂದ ಓಡಿಹೋಗುವ ಮೂಲಕ ಅಪರಾಧಿಗಳಿಗೆ ಉತ್ತೇಜನ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಕಾಣುತ್ತಿಲ್ಲ. ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಹಾಗೂ ಗುಪ್ತಚರ ಇಲಾಖೆಗೆ ಸಿಎಂ ಸ್ಥಳದ ಬಗ್ಗೆ ಮಾಹಿತಿ ಇಲ್ಲದಿರುವುದು ಗಂಭೀರ ವಿಚಾರ. ಇದು ಮುಖ್ಯಮಂತ್ರಿಯವರ ವೈಯಕ್ತಿಕ ಭದ್ರತೆಗೆ ಮಾತ್ರವಲ್ಲದೆ ಜಾರ್ಖಂಡ್‌ನ ಮೂರೂವರೆ ಕೋಟಿ ಜನರ ಸುರಕ್ಷತೆಯ ವಿಚಾರ" ಎಂದಿದ್ದಾರೆ.