ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ನಿರ್ಮಾಣವಾದ ಭವ್ಯ ರಾಮಮಂದಿರದಲ್ಲಿ ಸೋಮವಾರ ಪ್ರತಿಷ್ಠಾಪಿಸಲಾದ ನೂತನ 'ರಾಮ ಲಲ್ಲಾ' ವಿಗ್ರಹಕ್ಕೆ 'ಬಾಲಕ ರಾಮ' ಎಂದು ನಾಮಕರಣ ಮಾಡಲಾಗಿದೆ. ಏಕೆಂದರೆ, ಈ ಮೂರ್ತಿಯು ಇದು ಐದು ವರ್ಷದ ಬಾಲಕ ನಿಂತಿರುವ ಭಂಗಿಯಲ್ಲಿ ಶ್ರೀರಾಮ ದೇವರನ್ನು ಬಿಂಬಿಸುತ್ತದೆ.
ದೇಶದ ಮಾತ್ರವಲ್ಲದೇ ಜಗತ್ತಿನ ಗಮನ ಸೆಳೆದಿದ್ದ ಅಯೋಧ್ಯೆಯ ರಾಮ ಲಲ್ಲಾ ಸೋಮವಾರ ತಮ್ಮ ಜನ್ಮಭೂಮಿಯ ಮಂದಿರದಲ್ಲಿ ನೆಲೆನಿಂತಿದ್ದಾನೆ. ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭಕ್ಕೆ ಸಂಬಂಧಿಸಿದ ಅರ್ಚಕ ಅರುಣ್ ದೀಕ್ಷಿತ್ ಮಾತನಾಡಿ, ಜನವರಿ 22ರಂದು ಪ್ರತಿಷ್ಠಾಪನೆಯಾದ ಶ್ರೀರಾಮನ ವಿಗ್ರಹಕ್ಕೆ 'ಬಾಲಕ ರಾಮ' ಎಂದು ಹೆಸರಿಸಲಾಗಿದೆ. ಭಗವಾನ್ ರಾಮನ ವಿಗ್ರಹವನ್ನು 'ಬಾಲಕ ರಾಮ' ಎಂದು ನಾಮಕಾರಣ ಮಾಡಲು ಕಾರಣ ಮೂರ್ತಿಯ ಮಗುವನ್ನು ಹೋಲುತ್ತಾರೆ. ಈ ರಾಮನ ವಯಸ್ಸು ಐದು ವರ್ಷ ಎಂದು ಭಾವಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುಮಾರು 50 - 60 ಮಹಾಮಸ್ತಕಾಭಿಷೇಕಗಳನ್ನು ನಡೆಸಿರುವ ವಾರಾಣಸಿ ಮೂಲದ ಪುರೋಹಿತ ದೀಕ್ಷಿತ್, ನಾನು ಜನವರಿ 18ರಂದು ರಾಮನ ವಿಗ್ರಹದ ಮೊದಲ ನೋಟವನ್ನು ನೋಡಿದೆ. ಮೊದಲ ಬಾರಿಗೆ ವಿಗ್ರಹವನ್ನು ನೋಡಿದಾಗ ನಾನು ರೋಮಾಂಚನಗೊಂಡಿದ್ದೆ. ನನ್ನಲ್ಲಿ ಕಣ್ಣೀರು ಬರಲು ಪ್ರಾರಂಭಿಸಿತು. ಆಗ ನಾನು ಅನುಭವಿಸಿದ ಭಾವನೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇದುವರೆಗೆ ನಾನು ಮಾಡಿದ ಎಲ್ಲ ದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಗಳಲ್ಲಿ ಈ ಕಾರ್ಯವೇ ನನಗೆ ಅತ್ಯಂತ ದೈವಿಕ ಮತ್ತು ಸರ್ವೋಚ್ಚವಾಗಿದೆ ಎಂದು ಹೇಳಿದ್ದಾರೆ.