ಅಯೋಧ್ಯೆ(ಉತ್ತರ ಪ್ರದೇಶ): ಇಂದು ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರದ ಉದ್ಘಾಟನೆ ನಡೆಯಲಿದೆ. ಮುಂದಿನ ಕೆಲವೇ ಗಂಟೆಗಳಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಆರಂಭವಾಗಲಿದೆ. ಈ ಐತಿಹಾಸಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು, ಗಣ್ಯರು ಅಯೋಧ್ಯಾ ನಗರಿಗೆ ಆಗಮಿಸಿದ್ದಾರೆ. ಈ ರಾಮ ಮಂದಿರ ಪ್ರತಿ ವರ್ಷ 5 ಕೋಟಿಗೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲಿದ್ದು, ಭಾರತ ಹೊಸ ಪ್ರವಾಸಿ ತಾಣವನ್ನು ಪಡೆದುಕೊಂಡಿದೆ ಎಂದು ವಿದೇಶಿ ಬ್ರೋಕರೇಜ್ ಸಂಸ್ಥೆ ಜೆಫರೀಸ್ ತಮ್ಮ ವರದಿಯಲ್ಲಿ ಹೇಳಿದೆ.
$10 ಬಿಲಿಯನ್ ವೆಚ್ಚದಲ್ಲಿ (ಹೊಸ ವಿಮಾನ ನಿಲ್ದಾಣ, ನವೀಕೃತ ರೈಲು ನಿಲ್ದಾಣ, ಟೌನ್‌ಶಿಪ್, ಸುಧಾರಿತ ರಸ್ತೆ ಸಂಪರ್ಕ ಇತ್ಯಾದಿ) ಹೊಸ ಹೋಟೆಲ್‌ಗಳು ಮತ್ತು ಇತರ ಆರ್ಥಿಕ ಚಟುವಟಿಕೆಗಳೊಂದಿಗೆ ಈ ನಗರಿ ಪ್ರವಾಸೋದ್ಯಮದ ಮೇಲೆ ದುಪ್ಟಟ್ಟು ಧನಾತ್ಮಕ ಪರಿಣಾಮ ಉಂಟುಮಾಡುತ್ತದೆ. ಅಯೋಧ್ಯೆ ದೇಶದ ಪ್ರವಾಸೋದ್ಯಮ ಉತ್ತೇಜನಕ್ಕೆ ಒಂದು ದೊಡ್ಡ ಕೊಡುಗೆ ನೀಡಲಿದೆ. ಪ್ರಾಚೀನ ನಗರವನ್ನು ಜಾಗತಿಕ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರವಾಸಿ ತಾಣವಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿದೆ.
ಹೊಸ ರಾಮ ಮಂದಿರವನ್ನು $225 ಮಿಲಿಯನ್ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು ಅಯೋಧ್ಯೆಗೆ ಪ್ರವಾಸೋದ್ಯಮ ಮತ್ತು ಆರ್ಥಿಕ ಮತ್ತು ಧಾರ್ಮಿಕ ವಲಸೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಹೋಟೆಲ್‌ಗಳು, ಏರ್‌ಲೈನ್ಸ್, ಹಾಸ್ಪಿಟಾಲಿಟಿ, ಎಫ್‌ಎಂಸಿಜಿ, ಟ್ರಾವೆಲ್, ಸಿಮೆಂಟ್ ಸೇರಿದಂತೆ ಹಲವು ವಲಯಗಳು ಪ್ರಯೋಜನ ಪಡೆಯಲಿವೆ ಎಂದು ವರದಿ ವಿವರಿಸಿದೆ.