ನಾಗಾನ್:ತಾವೇ ಮಾಡಿದ ಪ್ರತಿಜ್ಞೆಯಿಂದಾಗಿ ಬರಿಗಾಲಲ್ಲೇ ಸಂಚರಿಸಿದ್ದ ವ್ಯಕ್ತಿ 24 ವರ್ಷಗಳ ಬಳಿಕ ಚಪ್ಪಲಿ ತೊಟ್ಟಿದ್ದಾರೆ. ಇವರ ಹೆಸರು ಅತುಲ್ ದೆಬಾನಾಥ್. 60 ವರ್ಷದ ಇವರು 24 ವರ್ಷಗಳ ಬಳಿಕ ಚಪ್ಪಲಿ ಧರಿಸಿದ್ದಾರೆ.
ಕಳೆದೆರಡು ದಶಕಗಳಿಂದ ಎಂತಹ ಸಂದರ್ಭದಲ್ಲಿ ಚಪ್ಪಲಿ ತೊಡದಿರಲು ಕಾರಣ ಇವರು ಮಾಡಿದ ಆ ಒಂದು ಪ್ರತಿಜ್ಞೆ. ಇದೀಗ ಆ ಪ್ರತಿಜ್ಞೆ ಎರಡು ದಶಕಗಳ ಬಳಿಕ ಪೂರೈಕೆಯಾಗಿದೆ.
ಪಕ್ಷ ಸೋತಿದ್ದಕ್ಕೆ ಪ್ರತಿಜ್ಞೆ: ದೆಬಾನಾಥ್, ಅಸ್ಸೋಂನ ನಾಗಾನ್ ಜಿಲ್ಲೆಯ ಸಮಗುರಿ ಕ್ಷೇತ್ರದ ಮತದಾರ. ಅಸ್ಸೋಂ ಗಣ ಪರಿಷದ್ನ (ಎಜಿಪಿ) ತಳಮಟ್ಟದ ಕಾರ್ಯಕರ್ತನಾಗಿದ್ದ ಇವರು 2001ರಲ್ಲಿ ತಮ್ಮ ಕ್ಷೇತ್ರದಲ್ಲಿ ಎಜಿಪಿ ಗೆದ್ದಲ್ಲಿ ಮಾತ್ರ ಚಪ್ಪಲಿ ತೊಡುವ ಪ್ರತಿಜ್ಞೆ ಮಾಡಿದ್ದರು. ಆದರೆ ಸಮಗುರಿ ಚುನಾವಣಾ ಕಣದಲ್ಲಿ ಎಜಿಪಿ ಗೆಲುವು ಸಾಧಿಸುವಲ್ಲಿ ವಿಫಲವಾಯಿತು. ಎಜಿಪಿ ಅಭ್ಯರ್ಥಿ ಅತುಲ್ ಶರ್ಮಾ ಅವರು ಕಾಂಗ್ರೆಸ್ ಅಭ್ಯರ್ಥಿ ರಕಿಬುಲ್ ಹುಸೇನ್ ವಿರುದ್ಧ ಸೋಲು ಕಂಡರು. ಪ್ರಾದೇಶಿಕ ಪಕ್ಷಗಳ ಭದ್ರಕೋಟೆಯಾದ ಸಮಗುರಿಯಲ್ಲಿ ಬೇರೆ ಪಕ್ಷ ಗೆದ್ದಿದ್ದರಿಂದ ಬೇಸರಗೊಂಡ ದೆಬಾನಾಥ್, ಮತ್ತೊಮ್ಮೆ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಪ್ರತಿಜ್ಞೆಯನ್ನು ಮಾಡಿದ್ದರು.
ಕಳೆದ ವರ್ಷ ಅಕ್ಟೋಬರ್ನಲ್ಲಿ ನಡೆದ ಚುನಾವಣೆಯಲ್ಲಿ 24 ವರ್ಷದ ಬಳಿಕ ಕಾಂಗ್ರೆಸ್ ಸೋಲುವ ಮೂಲಕ ಆಡಳಿತರೂಢ ಬಿಜೆಪಿ ಗೆಲುವು ಕಂಡಿತು. ಬಿಜೆಪಿಯ ದಿಪ್ಲುರಂಜನ್ ಶರ್ಮಾ ಅವರು ಕಾಂಗ್ರೆಸ್ ಅಭ್ಯರ್ಥಿ ತಂಜಿಲ್ ಹುಸೇನ್ ವಿರುದ್ಧ ಜಯ ಸಾಧಿಸಿದ್ದಾರೆ. ಮುಸ್ಲಿಂ ಪ್ರಾಬಲ್ಯದ ಸಮಗುರಿಯಲ್ಲಿ ಬಿಜೆಪಿ ಗೆದ್ದಿದೆ.