ವಿಜಯವಾಡ: ಆಂಧ್ರಪ್ರದೇಶದ ಸಿಎಂ ಆಗಿ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ರಜನಿಕಾಂತ್ ಕೂಡ ಭಾಗಿಯಾಗಲಿದ್ದಾರೆ. ಇದಕ್ಕಾಗಿ ಮಂಗಳವಾರ ಅವರು ಪತ್ನಿ ಸಮೇತವಾಗಿ ವಿಜಯವಾಡಕ್ಕೆ ಆಗಮಿಸಿದ್ದಾರೆ. ಉಳಿದಂತೆ ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಜೆ.ಪಿ ನಡ್ಡಾ ಹಾಗೂ ಗಣ್ಯರು ಭಾಗಿಯಾಗಲಿದ್ದಾರೆ.
ಚಂದ್ರಬಾಬು ನಾಯ್ಡು ಅವರು 11 ಗಂಟೆ 27ನಿಮಿಷಕ್ಕೆ 4ನೇ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ 23 ಜನರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಮಂಗಳವಾರ (ನಿನ್ನೆ) ಮುಂಜಾನೆ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ರಾಜ್ಯಪಾಲ ಎಸ್ ಅಬ್ದುಲ್ ನಜೀರ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಈ ವೇಳೆ, ಟಿಡಿಪಿ ಮಿತ್ರ ಪಕ್ಷವಾದ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ದಗ್ಗುಬಾಟಿ ಪುರಂದೇಶ್ವರಿ ಹಾಜರಿದ್ದರು.
23 ಸಚಿವರ ಪ್ರಮಾಣ ವಚನ:ತೆಲುಗು ದೇಶಂ ನಾಯಕ ಚಂದ್ರಬಾಬು ಅವರು ಎಪಿ ಮುಖ್ಯಮಂತ್ರಿಯಾಗಿ ಮತ್ತು ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ 23 ಜನರು ಸಚಿವರಾಗಿ ಇದೇ ವೇಳೆ, ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪವನ್ ಕಲ್ಯಾಣ್ ಸೇರಿದಂತೆ ಎಲ್ಲಾ 24 ಸಚಿವರ ಪಟ್ಟಿಯನ್ನು ನಿನ್ನೆ ಮಧ್ಯರಾತ್ರಿ ಪ್ರಕಟಿಸಲಾಗಿದೆ. ಇನ್ನೂ ಒಂದು ಸ್ಥಾನ ಖಾಲಿ ಉಳಿದು ಕೊಂಡಿದೆ.