ಋಷಿಕೇಶ (ಉತ್ತರಾಖಂಡ): ಉತ್ತರಾಖಂಡದ ಋಷಿಕೇಶದಲ್ಲಿ ನಡೆಯುತ್ತಿರುವ ಗಂಗಾ ಆರತಿ ಪೂಜೆಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಅವರ ಪುತ್ರಿ ಸಾರಾ ತೆಂಡೂಲ್ಕರ್ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಮುಂಬೈನಿಂದ ನೇರವಾಗಿ ಋಷಿಕೇಶದ ಪರಮಾರ್ಥ ನಿಕೇತನ ತಲುಪಿದ ಅವರು, ಅಧ್ಯಾತ್ಮಿಕ ಗುರು ಸ್ವಾಮಿ ಚಿದಾನಂದ ಸರಸ್ವತಿ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು. ಆಶೀರ್ವಾದದ ಬಳಿಕ ಕೆಲವು ಹೊತ್ತು ಅಲ್ಲಿನ ಸೌಂದರ್ಯ ಸವಿದರು.
ದೀಪಗಳ ಬೆಳಗಿನಲ್ಲಿ ಯಾವುದೇ ಅಡೆತಡೆ ಇಲ್ಲದೇ ಹರಿಯುತ್ತಿದ್ದ ಗಂಗಾನದಿಯ ಹರಿವು ಮತ್ತು ಋಷಿಕೇಶದಲ್ಲಿನ ಸೌಂದರ್ಯ ಸವಿದ ಅವರು, ಆ ಬಳಿಕ ಪರಮಾರ್ಥ ನಿಕೇತನದತ್ತ ತೆರಳಿದರು. ಅಲ್ಲಿ ಕೆಲವು ಹೊತ್ತು ಕುಳಿತು ಆಧ್ಯಾತ್ಮಿಕತೆಯ ಅನುಭವ ಪಡೆದರು.
ಗಂಗಾ ಆರತಿಯಲ್ಲಿ ಪಾಲ್ಗೊಂಡ ಅಂಜಲಿ ತೆಂಡೂಲ್ಕರ್ ಮತ್ತು ಪುತ್ರಿ ಸಾರಾ ತೆಂಡೂಲ್ಕರ್ ಅವರಿಗೆ ನೆನಪಿನ ಕಾಣಿಕೆ ನೀಡುತ್ತಿರುವುದು (Parmarth Niketan) ''ಗಂಗಾಮಾತೆಯ ಆರತಿಯನ್ನು ನೆರವೇರಿಸುವುದು ನಿಜಕ್ಕೂ ಅದ್ಭುತ ಅನುಭವ. ಗಂಗಾಮಾತೆಯ ವೈಭವಪೂರಿತ ಆರತಿ ಪೂಜೆಯಲ್ಲಿ ಪಾಲ್ಗೊಳ್ಳುವುದರಿಂದ ಆತ್ಮಕ್ಕೆ ಶಾಂತಿ ಮತ್ತು ಶುದ್ಧಿ ಸಿಗುತ್ತದೆ. ಈ ದೈವಿಕ ಆರತಿಯಲ್ಲಿ ಪಾಲ್ಗೊಳ್ಳುವ ಮೂಲಕ ನಾನು ಧನ್ಯನಾದೆ'' ಎಂದು ಅಂಜಲಿ ತೆಂಡೂಲ್ಕರ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇದೇ ವೇಳೆ, ಸ್ವಾಮಿ ಚಿದಾನಂದ ಸರಸ್ವತಿ ಅವರೊಂದಿಗೆ ವಿವಿಧ ಸಮಕಾಲೀನ ವಿಷಯಗಳನ್ನು ಚರ್ಚಿಸಿದ ಅವರು, ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ ಹಾಗೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪರಿಹಾರೋಪಾಯಗಳ ಕುರಿತು ಮಾತನಾಡಿದರು. ಪರಮಾರ್ಥ ನಿಕೇತನ ನಡೆಸುತ್ತಿರುವ ವಿವಿಧ ಸಾಮಾಜಿಕ ಮತ್ತು ಪರಿಸರ ಯೋಜನೆಗಳ ಕುರಿತು ಸ್ವಾಮಿ ಚಿದಾನಂದರಿಂದ ಈ ವೇಳೆ ಅವರು ಮಾಹಿತಿ ಕೂಡ ಪಡೆದರು.
ಗಂಗಾ ಮಾತೆಯನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಗಂಗಾ ಮತ್ತು ಇತರ ನದಿಗಳನ್ನು ಸ್ವಚ್ಛಗೊಳಿಸಲು ಮತ್ತು ಸಂರಕ್ಷಿಸಲು ಎಲ್ಲರೂ ಒಗ್ಗೂಡಬೇಕು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವಲ್ಲಿ ಸಚಿನ್ ತೆಂಡೂಲ್ಕರ್ ಅವರಂತಹವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಮಾಜ ಮತ್ತು ಪರಿಸರ ಸೇವೆಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಇದರಿಂದ ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಮತ್ತು ಶುದ್ಧ ನೀರು ಸಿಗುತ್ತದೆ ಎಂದು ಸ್ವಾಮಿ ಚಿದಾನಂದ ಸರಸ್ವತಿ ಹೇಳಿದರು.
ಇದೇ ವೇಳೆ ತೆಂಡೂಲ್ಕರ್ ಕುಟುಂಬವನ್ನು ಪ್ರಯಾಗ್ರಾಜ್ ಮಹಾಕುಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಸಹ ನೀಡಲಾಯಿತು.
ಇದನ್ನೂ ಓದಿ:ಕಾಶಿಯಲ್ಲಿ ದೇವ್ ದೀಪಾವಳಿ ಸಂಭ್ರಮ: ಮಹಿಳಾ ಸಬಲೀಕರಣಕ್ಕೆ ಸಮರ್ಪಣೆ, ಟಾಟಾಗೆ ಗೌರವ ನಮನ