ಹೈದರಾಬಾದ್: ಕೆನಡಾದಲ್ಲಿ ಹಿಂದೂಗಳ ಮೇಲಿನ ದಾಳಿ ತೀವ್ರ ನೋವುಂಟು ಮಾಡಿದೆ ಎಂದು ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ತಿಳಿಸಿದ್ದಾರೆ. ಹಿಂದೂ ಸಮುದಾಯದ ಸುರಕ್ಷತೆಯನ್ನು ಕಾಪಾಡಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೆನಡಾ ಸರ್ಕಾರಕ್ಕೆ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪವನ್ ಕಲ್ಯಾಣ್, ಜಾಗತಿಕವಾಗಿ ಹಿಂದೂಗಳು ಅಲ್ಪಸಂಖ್ಯಾತರು. ದ್ವೇಷದ ಪ್ರತೀ ಕೃತ್ಯ ಮಾನವೀಯತೆ ಮತ್ತು ಶಾಂತಿಯನ್ನು ಪಾಲಿಸುವ ಎಲ್ಲರ ಮೇಲಿನ ದಾಳಿ ಎಂದು ಹೇಳಿದ್ದಾರೆ.
ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇತ್ತೀಚೆಗೆ ಬಾಂಗ್ಲಾದೇಶದಲ್ಲೂ ಹಿಂದೂ ಸಹೋದರ, ಸಹೋದರಿಯರ ಮೇಲೆ ದಾಳಿ ಮತ್ತು ಹಿಂಸಾಚಾರ ನಡೆಯುತ್ತಿರುವುದನ್ನು ನೋಡಿದರೆ ತುಂಬಾ ನೋವಾಗುತ್ತದೆ ಎಂದು ತಿಳಿಸಿದ್ದಾರೆ.
ಅನೇಕ ದೇಶಗಳಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರ ಮತ್ತು ಉದ್ದೇಶಿತ ದ್ವೇಷದ ಕೃತ್ಯಗಳು ಮುಂದುವರಿದಿವೆ. ಜಾಗತಿಕ ನಾಯಕರು, ಶಾಂತಿ, ಪ್ರೀತಿಯ ಮಂತ್ರ ಜಪಿಸುವ ಅಂತಾರಾಷ್ಟ್ರೀಯ ಸಂಸ್ಥೆಗಳು ಮೌನವಾಗಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದು ಕೇವಲ ಸಹಾನುಭೂತಿಯ ಮನವಿಯಲ್ಲ. ಹಿಂದೂಗಳ ನೋವು ಮತ್ತು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಅವರು ಹೇಳಿದ್ದಾರೆ.
ಬ್ರಾಂಪ್ಟನ್ನ ಹಿಂದೂ ಸಭಾ ದೇಗುಲದಲ್ಲಿ ಖಲಿಸ್ತಾನಿ ಪ್ರತ್ಯೇಕವಾದಿಗಳು ನಡೆಸಿದ ದಾಳಿಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ದಾಳಿಯನ್ನು ಖಂಡಿಸಿ, ಹಿಂದೂಗಳ ಸುರಕ್ಷತೆಗೆ ಒತ್ತಾಯಿಸಿದ್ದಾರೆ.(ಪಿಟಿಐ)
ಇದನ್ನೂ ಓದಿ: ಕೆನಡಾದಲ್ಲಿ ಹಿಂದೂ ದೇವಾಲಯ, ಭಕ್ತರ ಮೇಲೆ ಖಲಿಸ್ತಾನಿಗಳ ದಾಳಿ: ಪ್ರಧಾನಿ ಟ್ರುಡೊ ಸೇರಿ ಹಲವರ ಖಂಡನೆ