ಅಮರಾವತಿ:ತಿರುಮಲ ದೇವಸ್ಥಾನದ ಪ್ರಸಿದ್ಧ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಿದ ಪ್ರಕರಣದ ಕುರಿತು ತನಿಖೆಗೆ ಆಂಧ್ರ ಪ್ರದೇಶ ಸರ್ಕಾರ 9 ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.
ಇತ್ತೀಚಿಗೆ ನಡೆದ ಎನ್ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಈ ಹಿಂದಿನ ವೈಎಸ್ಆರ್ಸಿಪಿ ಸರ್ಕಾರದಲ್ಲಿ ಶ್ರೀ ವೆಂಕಟೇಶ್ವರ ದೇಗುಲದ ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಹೊಂದಿರುವ ಕಲಬೆರಕೆ ತುಪ್ಪ ಬಳಕೆ ಮಾಡಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದರು. ಈ ಆರೋಪ ದೇಶದೆಲ್ಲೆಡೆ ಭಾರಿ ಸಂಚಲನ ಸೃಷ್ಟಿಸಿದ್ದು, ಕೋಟ್ಯಂತರ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಇದೀಗ ಆಂಧ್ರ ಸರ್ಕಾರ ತನಿಖೆಗೆ ಮುಂದಾಗಿದೆ. ಕಳೆದ ರಾತ್ರಿ ಆದೇಶ ಹೊರಡಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ನೀರಬ್ ಕುಮಾರ್ ಪ್ರಸಾದ್, ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಪಾವಿತ್ರ್ಯತೆಯನ್ನು ರಕ್ಷಿಸುವ ಕಾಪಾಡುವ ನಿಟ್ಟಿನಲ್ಲಿ ವಿವರವಾದ ಮತ್ತು ಸಮಗ್ರ ತನಿಖೆಗಾಗಿ ಎಸ್‌ಐಟಿ ರಚಿಸುವುದು ಅಗತ್ಯ ಎಂದು ತಿಳಿಸಿದ್ದಾರೆ.