ಆಗ್ರಾ, ಉತ್ತರಪ್ರದೇಶ: ಟ್ರಕ್ ಚಾಲಕನೊಬ್ಬ ತನ್ನ ವಾಹನದಡಿ ಸಿಲುಕಿದ ಇಬ್ಬರನ್ನು 300 ಮೀಟರ್ ವರೆಗೆ ಎಳೆದೊಯ್ದ ಘಟನೆ ಸೋಮವಾರ ಆಗ್ರಾದಲ್ಲಿ ನಡೆದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಕೆಲ ಸ್ಥಳೀಯರು ಈ ದೃಶ್ಯವನ್ನು ಕಂಡು ಚಾಲಕನನ್ನು ಬಲವಂತವಾಗಿ ತಡೆದು, ಟ್ರಕ್ ನಿಲ್ಲಿಸಿ ವಾಹನದ ಕೆಳಗಿದ್ದವರನ್ನು ಹೊರತೆಗೆದು ಜೀವ ಉಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಚಾಲಕನನ್ನು ಬಂಧಿಸಿ ಲಾರಿಯನ್ನು ವಶಕಕೆ ಪಡೆದುಕೊಂಡಿದ್ದಾರೆ.
ಆಗ್ರಾದ ನುನ್ಹೈ ನಿವಾಸಿಗಳಾಗಿರುವ ಇಬ್ಬರು ವ್ಯಕ್ತಿಗಳು ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ವಾಟರ್‌ವರ್ಕ್ಸ್‌ನಿಂದ ರಾಮ್‌ಬಾಗ್ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇಬ್ಬರು ಅಪಘಾತಕ್ಕೀಡಾಗಿ ಟ್ರಕ್ ಕೆಳಗೆ ಸಿಲುಕಿರುವುದು ಗೊತ್ತಾದರೂ, ಚಾಲಕ ಟ್ರಕ್ ಅನ್ನು ನಿಲ್ಲಿಸುವ ಬದಲು ವೇಗವಾಗಿ ಚಲಾಯಿಸಿಕೊಂಡು ಎಸ್ಕೇಪ್ ಆಗಲು ಪ್ರಯತ್ನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಹೇಳಿದ್ದಿಷ್ಟು: ಅಪಘಾತಕ್ಕೀಡಾಗಿ ಟ್ರಕ್ ಕೆಳಗೆ ಸಿಲುಕಿದ್ದ ಇಬ್ಬರು ಯುವಕರನ್ನು ಚಾಲಕ ಸುಮಾರು 300 ಮೀಟರ್ ಎಳೆದೊಯ್ದಿದ್ದ, ಈ ಘಟನೆಯನ್ನು ಕಂಡ ಕೆಲವು ಸ್ಥಳೀಯ ನಿವಾಸಿಗಳು ಚಾಲಕನನ್ನು ಬಲವಂತವಾಗಿ ನಿಲ್ಲಿಸಿ ಯುವಕರನ್ನು ರಕ್ಷಿಸಿದ್ದಾರೆ ಎಂದು ಛಟ್ಟಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.
ಹೀಗೆ ರಕ್ಷಿಸಿದ ಯುವಕರನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಮತ್ತು ಇನ್ನೂ ಚಿಕಿತ್ಸೆ ಮುಂದುವರೆದಿದೆ. ಆದರೆ ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಯುವಕರು ಆಗ್ರಾದವರಾಗಿದ್ದಾರೆ. ಘಟನೆಯ ನಂತರ ಕ್ಯಾಂಟರ್ ಚಾಲಕನನ್ನು ಬಂಧಿಸಿ ಟ್ರಕ್ ವಶಪಡಿಸಿಕೊಳ್ಳಲಾಗಿದೆ ಎಂದು ಇನ್ಸ್ ಪೆಕ್ಟರ್ ಮಾಹಿತಿ ನೀಡಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆ ವ್ಯಕ್ತಿಗಳು ಸಹಾಯಕ್ಕಾಗಿ ಕೂಗುತ್ತಿರುವುದು ಕಂಡುಬಂದಿದೆ. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: ಫುಟ್ಪಾತ್ ಮೇಲೆ ಹರಿದ ಡಂಪರ್, ಇಬ್ಬರು ಮಕ್ಕಳು ಸೇರಿ ಮೂವರು ಸ್ಥಳದಲ್ಲೇ ಸಾವು: 6 ಮಂದಿಯ ಸ್ಥಿತಿ ಚಿಂತಾಜನಕ