ಹೈದರಾಬಾದ್: ಪ್ರತಿ ವರ್ಷ, ಭಾರತ ಸರ್ಕಾರವು ಕ್ರೀಡಾಪಟುಗಳ ಸಾಧನೆಗಳನ್ನು ಗುರುತಿಸಲು ಪ್ರತಿಷ್ಠಿತ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡುತ್ತದೆ.
ಈ ಬಾರಿಯೂ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಕೆಲ ಹೆಸರುಗಳನ್ನು ಬಹಿರಂಗಪಡಿಸಲಾಗಿದೆ. ಭಾರತದ ಪುರುಷರ ಹಾಕಿ ತಂಡದ ನಾಯಕ ಮತ್ತು ಅನುಭವಿ ಡ್ರ್ಯಾಗ್-ಫ್ಲಿಕ್ಕರ್ ಹರ್ಮನ್‌ಪ್ರೀತ್ ಸಿಂಗ್ ಅವರ ಹೆಸರನ್ನು ಭಾರತದ ಅತಿದೊಡ್ಡ ಕ್ರೀಡಾ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ಭಾರತ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತು. ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಅವರ ಹೆಸರನ್ನೂ ಖೇಲ್ ರತ್ನ ಪ್ರಶಸ್ತಿಗೆ ಪ್ರಸ್ತಾಪಿಸಲಾಗಿದೆ. ಪ್ರವೀಣ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಏಷ್ಯನ್ ದಾಖಲೆಯೊಂದಿಗೆ ಟಿ- 64 ವರ್ಗ ಪುರುಷರ ಹೈಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಆದರೆ, ಖೇಲ್ ರತ್ನ ಪ್ರಶಸ್ತಿಗೆ ಪ್ರಸ್ತಾಪಿಸಲಾದ ಹೆಸರುಗಳಲ್ಲಿ ಭಾರತದ ಶೂಟರ್ ಮನು ಭಾಕರ್ ಅವರ ಹೆಸರನ್ನು ಸೇರಿಸಲಾಗಿಲ್ಲ. ಮನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು. ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಮನು ಭಾಕರ್ ಅವರು ಪ್ರಶಸ್ತಿಗೆ ಅರ್ಜಿ ಸಲ್ಲಿಸಿಲ್ಲ ಎಂದು ಕ್ರೀಡಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದೆ. ಆದರೆ, ಮನು ಕುಟುಂಬವು ಅರ್ಜಿ ಸಲ್ಲಿಸಿರುವುದಾಗಿ ಹೇಳಿದೆ.
ಮನು ಭಾಕರ್ ತಂದೆ ಪ್ರತಿಕ್ರಿಯೆ: ಈ ಬಗ್ಗೆ ಮನು ಭಾಕರ್ ತಂದೆ ಪ್ರತಿಕ್ರಿಯಿಸಿದ್ದಾರೆ. ‘‘ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದರೂ ಪ್ರಶಸ್ತಿಗಾಗಿ ಭಿಕ್ಷೆ ಬೇಡಬೇಕಾ? ಸರ್ಕಾರಿ ಅಧಿಕಾರಿಯೊಬ್ಬರು ನಿರ್ಧಾರ ತೆಗೆದುಕೊಂಡರೆ ಸಮಿತಿಯ ಸದಸ್ಯರೆಲ್ಲ ಸುಮ್ಮನಿರುತ್ತಾರಾ? ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆಯೇ? ಇದು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಮಾರ್ಗವೇ? ನನಗೆ ಅರ್ಥವಾಗುತ್ತಿಲ್ಲ.
ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದೇವೆ. ಆದರೆ ಸಮಿತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪೋಷಕರು ಮಕ್ಕಳನ್ನು ಕ್ರೀಡೆಯಲ್ಲಿ ಪ್ರೋತ್ಸಾಹಿಸಬೇಕೇ ಅಥವಾ ಸರ್ಕಾರದಲ್ಲಿ ಐಆರ್‌ಎಸ್ ಅಧಿಕಾರಿಗಳಾಗುವಂತೆ ಒತ್ತಾಯಿಸಬೇಕೇ?'' ಎಂದು ರಾಮ್ ಕಿಶನ್ ಭಾಕರ್ ಸ್ಪೋರ್ಟ್ಸ್ ಟಾಕ್ ಜೊತೆ ಮಾತನಾಡುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಏತನ್ಮಧ್ಯೆ, ಮನು ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್-2024 ರಲ್ಲಿ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕಗಳನ್ನು ಗೆದ್ದರು. ಈ ಮೂಲಕ 22ರ ಹರೆಯದ ಹರಿಯಾಣದ ಅಥ್ಲೀಟ್ ಸ್ವಾತಂತ್ರ್ಯದ ನಂತರ ಒಂದೇ ಒಲಿಂಪಿಕ್ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಭಾರತದ ಯುವ ಕ್ರಿಕೆಟರ್ಗೆ ಒಲಿದ ಜಾಕ್ಪಾಟ್: ಅಮೆರಿಕ ತಂಡಕ್ಕೆ ಕ್ಯಾಪ್ಟನ್ ಆಗಿ ಆಯ್ಕೆ