ಮುಂಬೈ(ಮಹಾರಾಷ್ಟ್ರ): ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾದ ಭಾರತದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹ ಸಮಾರಂಭಕ್ಕೆ ದಿನಗಣನೆ ಶುರುವಾಗಿದೆ. ಅಂಬಾನಿ ಆಪ್ತರು, ಖ್ಯಾತನಾಮರಿಗೆ ಈಗಾಗಲೇ ಆಮಂತ್ರಣವೂ ತಲುಪಿದೆ. ಈ ಆಮಂತ್ರಣ ಪತ್ರಿಕೆ ಹುಬ್ಬೇರಿಸುವಂತಿದೆ.
ಅನಂತ್ ಅಂಬಾನಿ ತಾಯಿ, ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಸೋಮವಾರ ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಮಗನ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ಶಿವನಿಗೆ ಅರ್ಪಿಸಿ ಆಶೀರ್ವಾದ ಪಡೆದಿದ್ದರು.
ಇದೀಗ ಆಮಂತ್ರಣ ಪತ್ರಿಕೆಯನ್ನು ಹಲವರು ಸ್ವೀಕರಿಸಿದ್ದಾರೆ. ಈ ಪೈಕಿ ಒಬ್ಬರು ಇದರ ವಿಶೇಷತೆಯನ್ನು ಹಂಚಿಕೊಳ್ಳುತ್ತಾ ವಿಡಿಯೋ ಮಾಡಿದ್ದಾರೆ. ಇದು ಐಷಾರಾಮಿ ಹಾಗೂ ಹೈ-ಪ್ರೊಫೈಲ್ ಮದುವೆಯ ಒಂದು ಝಲಕ್ ತೋರಿಸುವಂತಿದೆ.
ಆಮಂತ್ರಣ ಪತ್ರಿಕೆ ಬಾಕ್ಸ್‌ನಲ್ಲಿ ಏನೆಲ್ಲಾ ಇದೆ ಗೊತ್ತಾ?: ಸುಂದರವಾಗಿ ಅಲಂಕರಿಸಲ್ಪಟ್ಟ ಕಿತ್ತಳೆ ಬಣ್ಣದ ಬಾಕ್ಸ್‌ನಲ್ಲಿ ಆಮಂತ್ರಣವನ್ನು ನೀಡಲಾಗಿದೆ. ಹೃದಯದಲ್ಲಿ ಲಕ್ಷ್ಮೀ ದೇವಿಯನ್ನು ಹೊಂದಿರುವ ವಿಷ್ಣುವಿನ ಚಿತ್ರ ಮೇಲ್ಭಾಗದಲ್ಲಿದೆ. ಅದರ ಸುತ್ತಲೂ ವಿಷ್ಣು ಶ್ಲೋಕವನ್ನು ಮುದ್ರಿಸಲಾಗಿದೆ. ಬಾಕ್ಸ್‌ನೊಳಗೆ ವಿಷ್ಣು ಮತ್ತು ಲಕ್ಷ್ಮೀ ದೇವಿಯ ನೆಲೆಯಾದ ವೈಕುಂಠವನ್ನು ಬಿಂಬಿಸುವ ಆಕರ್ಷಕ ಕಸೂತಿ ಇದೆ. ವಿಷ್ಣು ಮಂತ್ರ ಧ್ವನಿ ಮುದ್ರಿಕೆಯೂ ಇದೆ.
ಬಾಕ್ಸ್ ತೆರೆದ ಬಳಿಕ ದೇವರ ವಿಗ್ರಹದಿಂದ ಅಲಂಕರಿಸಲ್ಪಟ್ಟ ಚಿನ್ನದ ಪುಸ್ತಕವಿದೆ. ಮೊದಲ ಪುಟದಲ್ಲಿ ಗಣೇಶನ ಚಿತ್ರವಿದೆ. ಅದನ್ನು ತೆಗೆದು ಫ್ರೇಮ್ ಮಾಡಿಡಬಹುದು. ಕೆಳಗಿನ ಪುಟಗಳಲ್ಲಿ ರಾಧಾ ಮತ್ತು ಕೃಷ್ಣರ ಚಿತ್ರಗಳನ್ನು ನೋಡಬಹುದು. ಇದರ ಪಕ್ಕದಲ್ಲೇ ನೀವು ವಿವಾಹ ಆಮಂತ್ರಣ ಪತ್ರವನ್ನು ನೋಡುವಿರಿ. ಅಂಬಾನಿ ಕುಟುಂಬದ ಕೈಬರಹದ ಟಿಪ್ಪಣಿ ಹೊಂದಿರುವ ಸಣ್ಣ ಲಕೋಟೆಯನ್ನೂ ಇಡಲಾಗಿದೆ.
ಈ ಆಮಂತ್ರಣವು ಭಗವಾನ್ ವಿಷ್ಣು, ಲಕ್ಷ್ಮೀ ದೇವಿ ಮತ್ತು ಅಂಬಿಕಾ ದೇವಿಯ ಚಿತ್ರಗಳನ್ನೂ ಒಳಗೊಂಡಿದೆ. ಇವೆಲ್ಲವನ್ನೂ ಫ್ರೇಮ್ ಹಾಕಿ ಬಳಸಬಹುದು. ಕೊನೆಯ ಪುಟವು ದೀಪಗಳೊಂದಿಗೆ ಬೆಳಗುತ್ತದೆ. ಇದು ಋಗ್ವೇದದ ಉಲ್ಲೇಖ ಹೊಂದಿದೆ. ಮುಖ್ಯ ಆಹ್ವಾನದ ಬಾಕ್ಸ್ ಹೊರತಾಗಿ ದೇವರ ಮಂದಿರ ಹೊಂದಿರುವ ಚಿಕ್ಕದಾದ ಮತ್ತೊಂದು ಕಿತ್ತಳೆ ಬಾಕ್ಸ್ ಇದೆ. ಸುಂದರ ಮತ್ತು ಮೃದುವಾದ ಕಾಶ್ಮೀರ ಶಾಲನ್ನೂ ಇಡಲಾಗಿದೆ.
ಜುಲೈ 12ರಂದು ಮುಂಬೈನಲ್ಲಿ ವೈಭವದ ವಿವಾಹೋತ್ಸವ: ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ವಿವಾಹ ಜುಲೈ 12ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ ಪ್ರತಿಷ್ಠಿತ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜರುಗಲಿದೆ. ಸಾಂಪ್ರದಾಯಿಕ ಹಿಂದೂ ವೈದಿಕ ಪದ್ಧತಿಗಳಂತೆ ಮಹೋತ್ಸವವನ್ನು ಆಯೋಜಿಸಲಾಗಿದೆ. ಮುಖ್ಯ ಸಮಾರಂಭ ಜುಲೈ 12ರಂದು ಪ್ರಾರಂಭವಾಗುತ್ತದೆ. ಜುಲೈ 13ರಂದು ಶುಭ್ ಆಶೀರ್ವಾದ್, ಜುಲೈ 14ರಂದು ಮದುವೆಯ ಆರತಕ್ಷತೆ ಏರ್ಪಡಿಸಲಾಗಿದೆ.
ಇದನ್ನೂ ಓದಿ:ಮಗನ ಮದುವೆಯ ಮೊದಲ ಲಗ್ನಪತ್ರಿಕೆ ಕಾಶಿ ವಿಶ್ವನಾಥನಿಗೆ ಅರ್ಪಿಸಿದ ನೀತಾ ಅಂಬಾನಿ!