ಹೈದರಾಬಾದ್:ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನದ ಧಾರ್ಮಿಕ ತುಳಿತಕ್ಕೊಳಗಾಗಿರುವ ಮುಸ್ಲಿಮೇತರ ಸಮುದಾಯದವರಿಗೆ ಭಾರತದ ಪೌರತ್ವ ನೀಡಲು ಉದ್ದೇಶಿಸಿ ಜಾರಿ ಮಾಡಲಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಮತ್ತೆ ವಾಪಸ್ ತೆಗೆದುಕೊಳ್ಳುವ ಮಾತೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ದೇಶದಲ್ಲಿನ ಅರ್ಹ ಪ್ರಜೆಗಳಿಗೆ ಭಾರತೀಯ ಪೌರತ್ವ ನೀಡುವುದು ಭಾರತ ಸರ್ಕಾರದ ಸಾರ್ವಭೌಮ ಹಕ್ಕು ಮತ್ತು ಅದರಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇದರ ಜೊತೆಗೆ ನುಸುಳುಕೋರರು ಮತ್ತು ನಿರಾಶ್ರಿತರ ನಡುವಿನ ವ್ಯತ್ಯಾಸ ಇಲ್ಲಿ ಬಯಲಾಗಲಿದೆ ಎಂದು ಅವರು ಹೇಳಿದರು.
ಧರ್ಮ ವಿಭಜನೆ ಬೇಡ:ವಿಪಕ್ಷಗಳಿಗೆ ಈ ಕಾನೂನಿನ ಮಹತ್ವ ತಿಳಿದಿಲ್ಲ. ರಾಜಕೀಯ ಮಾಡಲು ಹಲವಾರು ವಿಷಯಗಳಿವೆ. ಇದು ಪೌರತ್ವ ನೀಡುವ ಕಾಯ್ದೆ, ಯಾರ ಹಕ್ಕನ್ನೂ ಕಸಿದುಕೊಳ್ಳುವುದಿಲ್ಲ. ಬಾಂಗ್ಲಾದೇಶದಿಂದ ಬಂದ ಬಂಗಾಳಿ ಹಿಂದೂಗಳನ್ನು ವಿರೋಧಿಸಬೇಡಿ. ಅವರಂತೆ ನೀವು ಬಂಗಾಳಿಯೇ. ನಿರಾಶ್ರಿತರಿಗೆ ಮುಕ್ತ ಅವಕಾಶ ನೀಡಿ. ಕೇವಲ ಭಯ ಸೃಷ್ಟಿಸುವ ಮೂಲಕ, ಮತ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದೂ ಮುಸ್ಲಿಮರ ನಡುವೆ ವಿಭಜನೆ ಸೃಷ್ಟಿ ಮಾಡಬೇಡಿ ಎನ್ನುವ ಮೂಲಕ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ನಡೆಯನ್ನು ಟೀಕಿಸಿದರು.