ನವದೆಹಲಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕುರಿತ ನಕಲಿ ವಿಡಿಯೋ ಪ್ರಕರಣದಲ್ಲಿ ಮತ್ತೊಬ್ಬ ಕಾಂಗ್ರೆಸ್ಸಿಗನನ್ನು ಬಂಧಿಸಲಾಗಿದೆ. ಮಾಧ್ಯಮ ವಿಭಾಗದ ರಾಷ್ಟ್ರೀಯ ಸಂಯೋಜಕನಾಗಿದ್ದ ತೆಲಂಗಾಣ ಮೂಲದ ಅರುಣ್ ಬೀರೆಡ್ಡಿಯನ್ನು ಅರೆಸ್ಟ್ ಮಾಡಲಾಗಿದೆ. ಪ್ರಕರಣ ದೊಡ್ಡ ಮಟ್ಟದಲ್ಲಿ ನಡೆದ ಪಿತೂರಿಯಾಗಿದ್ದು, ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
ಕಾಂಗ್ರೆಸ್ಸಿಗ ಅರುಣ್ ಬೀರೆಡ್ಡಿ ಅವರು ಸ್ಪಿರಿಟ್ ಆಫ್ ಕಾಂಗ್ರೆಸ್ ಎಂಬ ಎಕ್ಸ್ ಖಾತೆಯನ್ನು ನಿರ್ವಹಿಸುತ್ತಿದ್ದರು. ನಕಲಿ ವಿಡಿಯೋ ಪ್ರಕರಣದಲ್ಲಿ ಅವರನ್ನು ಶುಕ್ರವಾರ ದೆಹಲಿಯಲ್ಲಿ ಬಂಧಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಬಂಧನವಾದ ಮೊದಲ ಪ್ರಕರಣವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸ್ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಎಫ್ಐಆರ್ನಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಸೇರಿಸಿದ್ದೇವೆ. ಪ್ರಕರಣದಲ್ಲಿ ದೊಡ್ಡ ಪಿತೂರಿಯೇ ನಡೆದಿದೆ ಎಂಬುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಬಂಧಿತ ಅರುಣ್ ಬೀರೆಡ್ಡಿ ಅವರು, ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ತಂಡದ ಪ್ರಮುಖ ಸದಸ್ಯರಲ್ಲಿದ್ದಾರೆ. ನಕಲಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದವರಲ್ಲಿ ಒಬ್ಬರಾಗಿದ್ದಾರೆ. ಬಳಿಕ ವಿಡಿಯೋವನ್ನು ಪಕ್ಷದ ಇತರ ಸದಸ್ಯರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.