ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಮಾಡಿಕೊಂಡಿರುವ ಕಾಂಗ್ರೆಸ್-ಆಪ್ ಪಕ್ಷಗಳ ಮೈತ್ರಿಯನ್ನು ಟೀಕಿಸಿರುವ ಬಿಜೆಪಿ, ಇದೊಂದು ಭ್ರಷ್ಟರ ಮೈತ್ರಿ. ತಮ್ಮ ಕಾಲ ಮೇಲೆ ನಿಲ್ಲುವ ಶಕ್ತಿ ಇಲ್ಲದ ಎರಡು ಪಕ್ಷಗಳು ಪರಸ್ಪರ ಬೆಂಬಲಿಸಲು ನಿರ್ಧರಿಸಿವೆ. ಆದರೆ, ಚುನಾವಣೆಯಲ್ಲಿ ಇದು ಕೆಲಸ ಮಾಡುವುದಿಲ್ಲ ಎಂದು ಲೇವಡಿ ಮಾಡಿದೆ.
ಕಾಂಗ್ರೆಸ್-ಆಪ್ ಪಕ್ಷಗಳು ತಮ್ಮ ಮೈತ್ರಿ, ಸೀಟು ಹಂಚಿಕೆ ಬಗ್ಗೆ ಪ್ರಕಟಿಸಿದ ಬೆನ್ನಲ್ಲೇ, ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಮತ್ತು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್-ಆಪ್ ಮೈತ್ರಿ ಮಾಡಿಕೊಂಡಿರುವ ಗುಜರಾತ್, ಹರಿಯಾಣ, ಚಂಡೀಗಢ, ಗೋವಾ ಅಥವಾ ದೆಹಲಿಯಲ್ಲಿ ಬಿಜೆಪಿಯು 2019ರ ಲೋಕಸಭಾ ಚುನಾವಣೆಯಲ್ಲಿ ಶೇ.50ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದೆ. ಪ್ರಧಾನಿ ಮೋದಿ ನೇತೃತ್ವದ ಆಡಳಿತಾರೂಢ ಒಕ್ಕೂಟದ ವಿರುದ್ಧ ಗಣಿತ ಮತ್ತು ರಸಾಯನಶಾಸ್ತ್ರ ಎರಡೂ ಇಲ್ಲದ, ಭ್ರಷ್ಟರ ಮೈತ್ರಿ ಇದು ಎಂದು ಟೀಕಿಸಿದರು.
ದೆಹಲಿಯ ಎಲ್ಲ ಏಳು ಲೋಕಸಭಾ ಸ್ಥಾನಗಳನ್ನು ಬಿಜೆಪಿ ಮತ್ತೆ ಗೆಲ್ಲುತ್ತದೆ ಎಂದು ಪ್ರತಿಪಾದಿಸಿದ ಸಚ್‌ದೇವ, ಮತಗಳ ವಿಭಜನೆಯನ್ನು ದೂಷಿಸಲು ಸಾಧ್ಯವಿಲ್ಲದ ಕಾರಣ ಎರಡೂ ಪಕ್ಷಗಳು ಕೈಜೋಡಿಸಿರುವುದು ಒಳ್ಳೆಯದು. ದೆಹಲಿ ವಿಧಾನಸಭೆಯಲ್ಲಿ 62 ಶಾಸಕರನ್ನು ಹೊಂದಿರುವ ಎಎಪಿ ತನ್ನ ಭ್ರಷ್ಟಾಚಾರವನ್ನು ಮೈತ್ರಿ ಕವಚದ ಅಡಿಯಲ್ಲಿ ಮರೆಮಾಡಲು ಶಾಸಕರಿಲ್ಲದ ಕಾಂಗ್ರೆಸ್ ಮುಂದೆ ಮಂಡಿಯೂರಿದೆ. ಅಲ್ಲದೇ, ಕಾಂಗ್ರೆಸ್ ಜೊತೆ ಎಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಕೇಜ್ರಿವಾಲ್ ತಮ್ಮ ಮಕ್ಕಳ ಹೆಸರಿನಲ್ಲಿ ಪ್ರಮಾಣ ಮಾಡಿದ್ದರು ಎಂಬುದಾಗಿ ಅವರು ನೆನಪಿಸಿ ವಾಗ್ದಾಳಿ ನಡೆಸಿದರು.