ಕರ್ನಾಟಕ

karnataka

ETV Bharat / bharat

ರಾಜ್‌ಕೋಟ್, ದೆಹಲಿ ಅಗ್ನಿ ದುರಂತ: ಮೃತರ ಕುಟುಂಬಸ್ಥರಿಗೆ ತಲಾ ₹ 2 ಲಕ್ಷ ಪರಿಹಾರ ಘೋಷಿಸಿದ ಮೋದಿ - PM Modi announces ex gratia - PM MODI ANNOUNCES EX GRATIA

ರಾಜ್‌ಕೋಟ್ ಗೇಮ್ ಝೋನ್ ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ ಎಂದು ಪಿಎಂಒ ಕಚೇರಿ ತಿಳಿಸಿದೆ.

ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ ಪರಿಹಾರ ಘೋಷಣೆ ಪ್ರಧಾನಿ ಮೋದಿ
ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ ಪರಿಹಾರ ಘೋಷಣೆ ಪ್ರಧಾನಿ ಮೋದಿ (ANI Photo)

By PTI

Published : May 26, 2024, 6:04 PM IST

Updated : May 26, 2024, 6:33 PM IST

ಅಹಮದಾಬಾದ್(ಗುಜರಾತ್​): ರಾಜ್‌ಕೋಟ್ ಗೇಮ್ ಝೋನ್ ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ ಎಂದು ಪಿಎಂಒ ಕಚೇರಿ ಭಾನುವಾರ ತಿಳಿಸಿದೆ. ಇನ್ನು ಗಾಯಾಳುಗಳಿಗೆ 50,000 ರೂಪಾಯಿಗಳನ್ನು ನೀಡಲಾಗುವುದು ಎಂದು ಪ್ರಧಾನಮಂತ್ರಿ ಕಾರ್ಯಾಲಯವು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ತಿಳಿಸಿದೆ. ಗುಜರಾತ್ ಸರ್ಕಾರವು ಮೃತರ ಪ್ರತಿ ಕುಟುಂಬಕ್ಕೆ 4 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳ ಪರಿಹಾರವನ್ನು ಘೋಷಿಸಿದೆ.

ಇನ್ನು ಇದೇ ವೇಳೆ ಪ್ರಧಾನಿ ಮೋದಿ ಅವರು, ದೆಹಲಿಯ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ಶಿಶುಗಳ ಕುಟುಂಬಸ್ಥರಿಗೂ ಸಹ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ಸಾವಿರ ಪರಿಹಾರ ಘೋಷಿಸಿದ್ದಾರೆ.

ಶನಿವಾರ ಸಂಜೆ ಗುಜರಾತ್‌ನ ರಾಜ್‌ಕೋಟ್ ನಗರದ ನಾನಾ-ಮಾವಾ ಪ್ರದೇಶದ ಗೇಮಿಂಗ್​ ಝೋನ್​ನಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಾಡದಲ್ಲಿ ನಾಲ್ವರು ಮಕ್ಕಳು ಸೇರಿದಂತೆ 28 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಪ್ರಧಾನಿ ಮೋದಿ ಮೃತರಿಗೆ ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಭಾನುವಾರ ಬೆಳಗ್ಗೆ ರಾಜ್‌ಕೋಟ್‌ಗೆ ಭೇಟಿ ನೀಡಿದ್ದರು. ಅಗ್ನಿ ದುರಂತದ ಸ್ಥಳವನ್ನು ಪರಿಶೀಲಿಸಿದ ಅವರು, ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ನಂತರ ಪಟೇಲ್, ರಾಜ್‌ಕೋಟ್‌ನ ಹಿರಾಸರ್ ವಿಮಾನ ನಿಲ್ದಾಣದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯ, ಗಾಯಾಳುಗಳ ಚಿಕಿತ್ಸೆ ಮತ್ತು ಸ್ಥಳೀಯ ಆಡಳಿತ ಕೈಗೊಂಡ ಇತರ ಕ್ರಮಗಳ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು ಎಂದು ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸಭೆಯಲ್ಲಿ, ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮತ್ತು ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಗ್ನಿ ದುರಂತ ಸಂಭವಿಸಿದ ಕೂಡಲೇ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (ಆರ್‌ಎಂಸಿ) ಮತ್ತು ಅಗ್ನಿಶಾಮಕ ದಳ, ಪೊಲೀಸರು ಪರಿಹಾರ ಕಾರ್ಯಾಚರಣೆಯಲ್ಲಿ ಕೈಗೊಂಡ ತ್ವರಿತ ಕ್ರಮಗಳ ಕುರಿತು ಅಧಿಕಾರಿಗಳು ಸಿಎಂಗೆ ವಿವರಿಸಿದರು.

ಗುರುತು ಪತ್ತೆಗಾಗಿ ಮೃತದೇಹಗಳಿಂದ ಮಾದರಿಗಳನ್ನು ಸಂಗ್ರಹಿಸಿ ಡಿಎನ್‌ಎ ವಿಶ್ಲೇಷಣೆಗಾಗಿ ಏರ್ ಆಂಬ್ಯುಲೆನ್ಸ್ ಮೂಲಕ ಗಾಂಧಿನಗರದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದರು. ಸರ್ಕಾರಿ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ಸುಟ್ಟಗಾಯಗಳಿಗೆ ಚಿಕಿತ್ಸೆ ಕೊಡಲು ವಾರ್ಡ್ ಅನ್ನು ಸ್ಥಾಪಿಸಲಾಗಿದೆ ಮತ್ತು ಶಸ್ತ್ರಚಿಕಿತ್ಸಕರು ಮತ್ತು ತರಬೇತಿ ಪಡೆದ ದಾದಿಯರನ್ನು ತಕ್ಷಣ ಜಾಮ್​ನಗರ್, ಅಹಮದಾಬಾದ್, ಮೊರ್ಬಿ, ಜುನಾಗಢ ಮತ್ತು ಭಾವನಗರದಿಂದ ರಾಜ್ಕೋಟ್​ಗೆ ಕರೆಸಲಾಗಿದೆ ಎಂದು ಸಿಎಂಒ ಮಾಹಿತಿ ನೀಡಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ವಿವಿಧ ನಗರಗಳಲ್ಲಿನ ಎಲ್ಲಾ ಗೇಮಿಂಗ್​ ಝೋನ್​ಗಳನ್ನು ಮುಚ್ಚುವಂತೆ ಗುಜರಾತ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ವಿಕಾಸ್ ಸಹಾಯ್ ಆದೇಶಿಸಿದ್ದಾರೆ.

ಇದನ್ನೂ ಓದಿ:ರಾಜ್‌ಕೋಟ್‌ನ ಗೇಮಿಂಗ್ ಸೆಂಟರ್‌ ದುರಂತ: ಸುಮೊಟೋ ದೂರು ದಾಖಲಿಸಿಕೊಂಡ ಗುಜರಾತ್ ಹೈಕೋರ್ಟ್ - RAJKOT GAME ZONE TRAGEDY

Last Updated : May 26, 2024, 6:33 PM IST

ABOUT THE AUTHOR

...view details